ನಾಗ್ಪುರ: ಬ್ಲ್ಯಾಕ್ ಮೇಲ್ ಗೆ ಬೇಸತ್ತು ವ್ಯಕ್ತಿಯೊಬ್ಬ ಫೇಸ್ ಬುಕ್ ಲೈವ್ ಮಾಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರ ಕಲಾಮ್ನಾ ಪ್ರದೇಶದ ನಿವಾಸಿ ಮನೀಶ್ ಅಲಿಯಾಸ್ ರಾಜ್ ಯಾದವ್(38) ಮೃತ ವ್ಯಕ್ತಿ. ಭಾನುವಾರ(ಸೆ.10) ರಂದು ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ ಯಾದವ್ ತನ್ನದೇ ಗ್ರಾಮದ 19 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಸೆ.6 ರಂದು ಯುವತಿ ಮನೆಯಿಂದ ನಾಪತ್ತೆಯಾಗಿದ್ದು, ಇದಕ್ಕೆ ರಾಜ್ ಯಾದವ್ ಕಾರಣವೆಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ ರಾಜ್ ಯಾದವ್ ಅವರಿಗೆ ಯುವತಿಯ ಕುಟುಂಬದವರು ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆತನ ಮೇಲೆ ಆರೋಪವನ್ನು ಮಾಡಿದ್ದಾರೆ.
ಇದೇ ಕಾರಣದಿಂದ ಬೇಸತ್ತು ಹೋದ ರಾಜ್ ಯಾದವ್ ಅವರು ಫೇಸ್ ಬುಕ್ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
5 ಲಕ್ಷ ರೂಪಾಯಿ ನೀಡದಿದ್ದರೆ ನನ್ನ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಬೆದರಿಸಿದ್ದಾರೆ. ಇದೇ ರೀತಿಯ ಬ್ಲ್ಯಾಕ್ ಮೇಲ್ ನ್ನು ಉತ್ತರ ಪ್ರದೇಶದ ಯುವಕನಿಗೂ ಯುವತಿಯ ಮನೆಯವರು ಮಾಡಿದ್ದಾರೆ ಎಂದು ಹೇಳಿ ಫೇಸ್ ಬುಕ್ ಲೈವ್ ನಲ್ಲೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಮ್ನಾ ಪೊಲೀಸರು ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.