ಮನೆ ಕಾನೂನು ಲೋಕ ಅದಾಲತ್‌ ನಲ್ಲಿ 24.36 ಲಕ್ಷ ಪ್ರಕರಣ ಇತ್ಯರ್ಥ; ₹1,420 ಕೋಟಿ ಪರಿಹಾರ ಪಾವತಿ

ಲೋಕ ಅದಾಲತ್‌ ನಲ್ಲಿ 24.36 ಲಕ್ಷ ಪ್ರಕರಣ ಇತ್ಯರ್ಥ; ₹1,420 ಕೋಟಿ ಪರಿಹಾರ ಪಾವತಿ

0

ಕಳೆದ ಶನಿವಾರ ರಾಜ್ಯದಾದ್ಯಂತ ನಡೆದ ಲೋಕ ಅದಾಲತ್​ ನಲ್ಲಿ ಒಟ್ಟು 24,36,270 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 1,420 ಕೋಟಿ ಪರಿಹಾರ ಮೊತ್ತವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ಕೊಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್‌ ಮಂಗಳವಾರ ವಿವರಿಸಿದರು.

ಹೈಕೋರ್ಟ್‌ ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಹೈಕೋರ್ಟ್‌ ನ ಮೂರು ಪೀಠಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,012 ಪೀಠಗಳು ಅದಾಲತ್ ​ಗಾಗಿ ಕಾರ್ಯನಿರ್ವಹಿಸಿವೆ. ನ್ಯಾಯಾಲಯದಲ್ಲಿ ಬಾಕಿಯಿರುವ 2,14,925 ಪ್ರಕರಣಗಳು ಹಾಗೂ 22,21,345 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 24,36,270 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ, ಲೋಕ ಅದಾಲತ್​ ನಿಂದ ಸಾರ್ವಜನಿಕರಿಗೆ ಯಾವುದೇ ವೆಚ್ಚವಿಲ್ಲದೆ ಪರಿಹಾರ ಲಭ್ಯವಾಗುತ್ತಿದೆ. ಜೊತೆಗೆ, ನ್ಯಾಯಾಲಯದ ಸಮಯವೂ ಉಳಿಯುತ್ತಿದೆ ಎಂದು ವಿವರಿಸಿದರು.

ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರು ಅದಾಲತ್​ ನಲ್ಲಿ 1,305 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 255 ದಂಪತಿ ಒಂದಾಗಿದ್ದಾರೆ. ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 3,303 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಒಟ್ಟು 166 ಕೋಟಿ ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 9,269 ಚೆಕ್​ ಬೌನ್ಸ್​ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ₹373 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. 430 ಭೂಸ್ವಾಧೀನ ಪ್ರಕರಣಗಳಲ್ಲಿ ಇತ್ಯರ್ಥಪಡಿಸಿದ್ದು, ₹88 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ. 767 ಮೋಟಾರು ವಾಹನ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ₹48 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಇದಲ್ಲದೆ, ಇತರೆ 2,899 ಪ್ರಕರಣಗಳು ಇತ್ಯರ್ಥವಾಗಿದ್ದು ₹103 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಅಲ್ಲದೇ, 35 ರೇರಾ ಪ್ರಕರಣಗಳಲ್ಲಿ ₹7.40 ಕೋಟಿ ಪರಿಹಾರ, 95 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ ₹2 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅದಾಲತ್ ​ನ ವಿಶೇಷ ಪ್ರಕರಣಗಳು

ಮೋಟಾರ್​ ವಾಹನ ಪ್ರಕರಣವೊಂದರಲ್ಲಿ ₹51,46,820 ಪರಿಹಾರ, ಹಾಗೂ ಮತ್ತೊಂದು ಪ್ರಕರಣದಲ್ಲಿ ₹53 ಕೋಟಿ ಪರಿಹಾರ ವಿತರಣೆ.

ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಎಚ್​ ಡಿಎಫ್ ​ಸಿ ಬ್ಯಾಂಕ್​ ಹಾಗೂ ಬಿ ವಿ ಮಂಜುನಾಥ್​ ವಿರುದ್ಧದ ಪ್ರಕರಣದಲ್ಲಿ 6.85 ಕೋಟಿ ಪರಿಹಾರ, ಹಾಗೂ ಟಾಟಾ ಕ್ಯಾಪಿಟಲ್​ ಫೈನಾನ್ಸ್​ ಸರ್ವೀಸ್​ ಲಿಮಿಟೆಡ್​ ಮತ್ತು ಗಿರಿ ಸಹಜನ್ಯ ಪ್ರೋಜೆಕ್ಟ್​ ವಿರುದ್ಧದ ಪ್ರಕರಣದಲ್ಲಿ ₹3.35 ಕೋಟಿ ಪರಿಹಾರ, ಟಾಟಾ ಕ್ಯಾಪಿಟಲ್​ ಸರ್ವೀಸ್​ ಮತ್ತು ವೆಂಕಟೇಶ್ವರ ಕ್ರಷರ್ಸ್​ ನಡುವಿನ ಪ್ರಕರಣದಲ್ಲಿ ₹3.35 ಕೋಟಿ ಪರಿಹಾರ ನೀಡಿ ಇತ್ಯರ್ಥ ಪಡಿಸಲಾಗಿದೆ.

ಐಡಿಎಫ್ ​ಸಿ ಫಸ್ಟ್​ ಬ್ಯಾಂಕ್​ ಲಿಮಿಟೆಡ್​ ಮತ್ತು ಜೆ.ಲಾಲ್​ ಅಂಡ್​ ಸನ್ಸ್​ ಮತ್ತಿತರರು ಪ್ರಕರಣದಲ್ಲಿ ₹2.53 ಕೋಟಿ ಪರಿಹಾರ.

ಟಾಟಾ ಕ್ಯಾಪಿಟಲ್​ ಫೈನಾನ್ಸ್​ ಸರ್ವೀಸ್​ ಲಿಮಿಟೆಡ್​ ಹಾಗೂ ಶ್ಯಾನ್​ ಬಾಗ್​ ವಿನಾಯಕ್ ಟಿಂಬರ್​ ಡಿಪೋ ವಿರುದ್ಧದ ಚೆಕ್​ ಬೌನ್ಸ್​ ಪ್ರಕರಣದಲ್ಲಿ ₹2.53 ಕೋಟಿ ಪರಿಹಾರ ವಿತರಣೆ ಮಾಡಿ ಪ್ರಕರಣ ಇತ್ಯರ್ಥಪಡಿಸಲಾಗಿದೆ.