ಮನೆ ದೇವಸ್ಥಾನ ಶ್ರೀ ಮುತ್ತೆತ್ತರಾಯ ಸ್ವಾಮಿಯ ದೇವಾಲಯ

ಶ್ರೀ ಮುತ್ತೆತ್ತರಾಯ ಸ್ವಾಮಿಯ ದೇವಾಲಯ

0

ಶ್ರೀ ಮುತ್ತೆತ್ತರಾಯ ಸ್ವಾಮಿಯ ದೇವಾಲಯ, ಮುತ್ತತ್ತಿ ಗ್ರಾಮ, ಹಲಗೂರು ಹೋಬಳಿ, ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ.

ಮನೋಜವಂ ಮಾರುತತುಲ್ಯವೇಗಂ ಜಿತೇಂನ್ದ್ರಿಯಂ ಬುದ್ಧಿಮತಾಂ ವರಿಷ್ಟಂ |

ವಾತಾತ್ಮಜಂ ವಾನರಯೂಥ ಮುಖ್ಯ ಶ್ರೀ ರಾಮದೂತಂ ಶಿರಸಾ ನಮಾಮಿ||

209 ಹಲಗೂರು ನಿಂದ ಬಸ್ ಮಾರ್ಗವಾಗಿ ಹೋಗಬಹುದು. ಮತ್ತು  ಸಾತನೂರು ಕಡೆಯಿಂದ ಕೂಡ ಹೋಗಬಹುದು. ಕಾವೇರಿ ನದಿಯ ಸುಂದರವಾದ ಪ್ರಕೃತಿ ಸೌಂದರ್ಯದ ನಡುವೆ ಸ್ವಾಮಿ ನೆಲೆಗೊಂಡಿರುವ ಕ್ಷೇತ್ರವಿದು.

ಹನುಮದೇವರ ಮುತ್ತೆತ್ತರಾಯಸ್ವಾಮಿ ಎಂದು ಇದು ತ್ರೇತಾಯುಗದ ದೇವಾಲಯ. ಶ್ರೀರಾಮದೇವರ ಪಟ್ಟಾಭಿಷೇಕದ ನಂತರ ಹನುಮದೇವರು ಕಾಡಿಗೆ ಬರುತ್ತಾರೆ. ಮುತ್ತತ್ತಿಯಿಂದ 3 ಕಿಲೋಮೀಟರ್ ದೂರ ಪಾದಧಾರೆ ಎಂಬ ಸ್ಥಳದಲ್ಲಿ ಹನುಮ ದೇವರು ತಪಸ್ಸು ಮಾಡುತ್ತಿರುತ್ತಾರೆ. ಸೀತಾಮಾತೆಗೆ ಒಮ್ಮೆ ಹನುಮ ದೇವರನ್ನು ನೋಡಬೇಕೆಂದು ಇಚ್ಛೆಯುಂಟಾಗಿ ಶ್ರೀರಾಮ ದೇವರಲ್ಲಿ ವಿನಂತಿಸಿಕೊಂಡು ಶ್ರೀರಾಮ ಲಕ್ಷ್ಮಣ ಸಮೇತರಾಗಿ ಸೀತಾಮಾತೆಯು ಹನುಮ ದೇವರನ್ನು ನೋಡಲು ಬರುತ್ತಿರುತ್ತಾರೆ.

ಮುತ್ತತ್ತಿಯಿಂದ 3 ಕಿಲೋಮೀಟರ್ ತಿರನೆಮಡು ಎಂಬ ಸ್ಥಳದಲ್ಲಿ ಸೀತಾಮಾತೆಯು ಸ್ನಾನ ಮಾಡಲು ನದಿಗೆ ಹೋದಾಗ ಸೀತಾದೇವಿಯ ಮೂಗುತಿ ನೀರಿನಲ್ಲಿ ಕಳೆದುಹೋಗುತ್ತದೆ. ಆ ಸಂದರ್ಭದಲ್ಲಿ ಸೀತಾದೇವಿಯು ತುಂಬಾ ದುಃಖ ಪಡುತ್ತಾರೆ. ತಂದೆ ಕೊಟ್ಟ ಮೂಗುತಿಯನ್ನು ಕಳೆದುಕೊಂಡೇನಲ್ಲ ಎಂದು ದುಃಖದಿಂದ ಪರಿತಪಿಸುತ್ತಾಳೆ. ತಪಸ್ಸು ಮಾಡುತ್ತಿದ್ದ ಹನುಮಂತ ಗೋಚರಿಸುತ್ತಾನೆ. ಹನುಮ ದೇವರು ಅಂಜನಾ ಹಾಕಿ ನೋಡಿದಾಗ ಅವರಿಗೆ ಸೀತಾಮಾತೆ ಇರುವ ಸ್ಥಳ ಗೊತ್ತಾಗುತ್ತದೆ. ತಕ್ಷಣ ಹನುಮ ದೇವರು ಆ ಸ್ಥಳಕ್ಕೆ ಬರುತ್ತಾರೆ. ಸೀತಾಮಾತೆಯು ದುಃಖ ಪಡುವ ಕಾರಣ ತಿಳಿದು ತಾವು ಅವರ ದುಃಖ ಬಗೆಹರಿಸುವೆನೆಂದು ಹೇಳುತ್ತಾರೆ.

ತಮ್ಮ ಬಾಲವನ್ನು ನದಿಗೆ ಬಿಟ್ಟು ಮೂರು ಬಾರಿ ಹುಡುಕುತ್ತಾರೆ ಮೂರನೇ ಬಾರಿ ಮೂಗುತಿ ಸಿಗುತ್ತದೆ ಸೀತಾಮಾತೆ ಸಂತೋಷಗೊಂಡು ಹನುಮನಿಗೆ ಒಂದು ಹೊಸ ಹೆಸರು ನಾಮಕರಣ ಮಾಡುತ್ತಾರೆ ಮುತ್ತನ್ನು ಎತ್ತಿಕೊಟ್ಟರಾಯ ಮುತ್ತೆತ್ತರಾಯ ಅಂದಿನಿಂದ ಅಲ್ಲಿನ ಹನುಮ ದೇವರ ಗುಡಿ ಮುತ್ತೆತ್ತರಾಯಸ್ವಾಮಿ ಎಂಬ ಹೆಸರಿನಿಂದ ಪ್ರಸಿದ್ಧನಾಗಿ ಈ ಕ್ಷೇತ್ರದಲ್ಲಿ ನೆಲೆಗೊಂಡಿದ್ದಾನೆ.

ಇಲ್ಲಿನ ಇನ್ನೊಂದು ಪೌರಾಣಿಕ ಹಿನ್ನೆಲೆ ಎಂದರೆ ಒಂದು ಹುತ್ತದಲ್ಲಿ ಸ್ವಾಮಿ ನೆಲೆಸಿರುತ್ತಾನೆ. ಒಬ್ಬ ಕಾಳಿದಾಸ ಎನ್ನುವ ಗೊಲ್ಲರ ವ್ಯಕ್ತಿ ಹಲವಾರು ಹಸುಗಳನ್ನು ಸಾಕಿಕೊಂಡಿರುತ್ತಾರೆ. ಅವನ ಒಂದು ಕಾಮದೇನು ಎಂಬ ಹಸಿವು ಸ್ವಾಮಿ ಇರುವ ಹುತ್ತದಲ್ಲಿ ನಿತ್ಯವೂ ಹಾಲು ಕೊಟ್ಟು ಬರುತ್ತಿರುತ್ತದೆ. ಒಂದು ದಿನ ಆ ಗೊಲ್ಲನು ಅಲ್ಲಿಗೆ ಬಂದು ನೋಡಿದಾಗ ಅವನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ ಸ್ವಾಮಿ ತಾನು ಹುತ್ತದಲ್ಲಿರುವ ವಿಚಾರವನ್ನು ತಿಳಿಸಿ ತನಗೆ ಒಂದು ದೇವಾಲಯವನ್ನು ಕಟ್ಟಿಸಬೇಕೆಂದು ಹೇಳಿದ ಹಾಗೆ ಕಾಳಿದಾಸನಿಗೆ ಕೇಳಿಸುತ್ತದೆ. ಹನುಮ ದೇವರು ಮೊದಲು ಕಕ್ಕೆ ಮರದಲ್ಲಿ ಒಡಮೂಡಿರುತ್ತಾರೆ. 1986 ರಲ್ಲಿ ಅದೇ ರೀತಿ ಒಂದು ಶಿಲೆ ಮೂಡಿಸಿ ದೇವಾಲಯವನ್ನು ಪುನರುಜ್ಜೀವನಗೊಳಿಸುತ್ತಾರೆ.

ಈ ದೇವಾಲಯದಲ್ಲಿ ಭಕ್ತರು ಹರಕೆಯನ್ನು ಹೊತ್ತು ತಮ್ಮ ಕಾರ್ಯ ನೆರವೇರಿದ ನಂತರ ನಡೆಸುವ ವಿಶೇಷ ಪೂಜೆಗಳೆಂದರೆ ಹುಲಿ ವಾಹನೋತ್ಸವ, ಅಭಿಷೇಕ, ಅನ್ನದಾಸೋಹ ಇನ್ನಿತರ ಸೇವೆಯನ್ನು ನೆರವೇರಿಸುತ್ತಿದ್ದಾರೆ.

ಈ ದೇವಾಲಯದ ವಿಶೇಷ ಪೂಜೆಗಳೆಂದರೆ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸುತ್ತಾರೆ ಶ್ರೀ ರಾಮನವಮಿಯ ಶ್ರಾವಣ ಮಾಸದ ಜಾತ್ರೆ ಉತ್ಸವವನ್ನು ನೆರವೇರಿಸುತ್ತಾರೆ. ಶ್ರಾವಣ ಶನಿವಾರಗಳಂದು ವಿಶೇಷ ಪೂಜೆ ಕೈಂಕರ್ಯಗಳಿರುತ್ತವೆ. ಶ್ರಾವಣ ಮಾಸದಲ್ಲಿ ಬರುವ ಕೊನೆಯ ಶನಿವಾರ ಹನುಮನಿಗೆ ವಿಶೇಷ ಅಭಿಷೇಕ ಅಲಂಕಾರ ರಥೋತ್ಸವ ಪೂಜೆಗಳನ್ನು ನೆರವೇರಿಸುತ್ತಾರೆ. ಪ್ರತಿ ಶನಿವಾರ ಭಾನುವಾರ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಲಂಕಾರ ಮತ್ತು ವಿಶೇಷವಾದ ಹೂವಿನ ಅಲಂಕಾರ ಕೇಸರಿ ಅಲಂಕಾರವು ಇರುತ್ತದೆ.