ಮನೆ ಕ್ರೀಡೆ ಐಪಿಎಲ್: ಆಡಿದ 7 ಪಂದ್ಯಗಳಲ್ಲಿ ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡ

ಐಪಿಎಲ್: ಆಡಿದ 7 ಪಂದ್ಯಗಳಲ್ಲಿ ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡ

0

ಮುಂಬೈ(Mmumbai): ಚೆನ್ನೈ ಸೂಪರ್‌ ಕಿಂಗ್ಸ್‌(Chennai super kings) ತಂಡದ ವಿರುದ್ಧ ಗುರುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌(Mumbai Indians) ತಂಡ ಮೂರು ವಿಕೆಟ್‌ ಅಂತರದಿಂದ ಸೋಲು ಕಂಡಿದ್ದು, ಇದರೊಂದಿಗೆ ಐಪಿಎಲ್‌ ಟೂರ್ನಿಯೊಂದರಲ್ಲಿ ಆಡಿದ ಮೊದಲ ಏಳು ಪಂದ್ಯಗಳಲ್ಲಿಯೂ ಸೋಲು ಕಂಡ ಮೊದಲ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

ಇಲ್ಲಿನ ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ತಂಡದ ನಾಯಕ ರವೀಂದ್ರ ಜಡೇಜ, ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್‌ ಆರಂಭಿಸಿದ ಮುಂಬೈ, ತಿಲಕ್‌ ವರ್ಮಾ (51*) ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 155 ರನ್‌ ಗಳಿಸಿತ್ತು.

ಈ ಗುರಿ ಬೆನ್ನತ್ತಿದ ಚೆನ್ನೈ ಪರ ಕನ್ನಡಿಗ ರಾಬಿನ್‌ ಉತ್ತಪ್ಪ (30), ಅಂಬಟಿ ರಾಯುಡು (40) ಉತ್ತಮ ಆಟವಾಡಿದ್ದರು. ಕೊನೆಯಲ್ಲಿ ಬೀಸಾಟವಾಡಿದ ಡ್ವೇನ್‌ ಪ್ರೆಟೋರಿಯಸ್‌ (22) ಮತ್ತು ಫಿನಿಶರ್ ಪಾತ್ರ ನಿಭಾಯಿಸಿದ ಮಹೇಂದ್ರ ಸಿಂಗ್‌ ಧೋನಿ (28*) ಚೆನ್ನೈ ತಂಡಕ್ಕೆ ಕೊನೇ ಎಸೆತದಲ್ಲಿ ಗೆಲುವು ತಂದುಕೊಟ್ಟರು.

ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡ ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಮಾ.2) ವಿರುದ್ಧ ಸೆಣಸಿತ್ತು. ಆ ಪಂದ್ಯವನ್ನು ಡೆಲ್ಲಿ 4 ವಿಕೆಟ್‌ ಅಂತರದಿಂದ ಗೆದ್ದುಕೊಂಡಿತ್ತು. ಐಪಿಎಲ್‌ ಟೂರ್ನಿಗಳಲ್ಲಿ ಇದುವರೆಗೆ ವಿವಿಧ ತಂಡಗಳು 11 ಸಲ ಸತತ 7 ಪಂದ್ಯಗಳಲ್ಲಿ ಸೋಲು ಕಂಡಿವೆ. ಆದರೆ, ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡ ಮೊದಲ ತಂಡ ಮುಂಬೈ.

ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ 2013ರಲ್ಲಿ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 2019ರಲ್ಲಿ ಸತತ 6 ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿದ್ದವು.