ಮನೆ ಸುದ್ದಿ ಜಾಲ ಕೊಡಗು: 69 ಶಾಸನಗಳು ಪತ್ತೆ

ಕೊಡಗು: 69 ಶಾಸನಗಳು ಪತ್ತೆ

0

ಮಡಿಕೇರಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಕೊಡಗು ಜಿಲ್ಲೆಯ ಮಡಿಕೇರಿ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 69 ಶಾಸನಗಳನ್ನು ಸಂಶೋಧಿಸಿದ್ದು ಓದುವ ಕಾರ್ಯ ನಡೆಸುತ್ತಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಅತ್ಯಧಿಕ 34 ಕುಶಾಲನಗರ ತಾಲೂಕಿನಲ್ಲಿ 18 ಹಾಗೂ ಮಡಿಕೇರಿ ತಾಲೂಕಿನಲ್ಲಿ 17 ಶಾಸನಗಳು ಪತ್ತೆಯಾಗಿವೆ. ಇವುಗಳು ಈ ಹಿಂದೆ ಪ್ರಕಟಗೊಂಡಿರುವ ಶಾಸನ ಸಂಪುಟಗಳಾದ “ಎಪಿಗ್ರಾಫಿಯಾ ಕರ್ಣಾಟಿಕ”, “ಇತಿಹಾಸ ದರ್ಶನ” ಸೇರಿದಂತೆ ಯಾವುದೇ ಗ್ರಂಥದಲ್ಲೂ ಉಲ್ಲೇಖವಾಗಿಲ್ಲ.

ಸಿಕ್ಕಿರುವ ಶಾಸನಗಳು ಏಳನೇ ಶತಮಾನದಿಂದ 18ನೇ ಶತಮಾನಗಳ ವರೆಗಿನ ಕಾಲಕ್ಕೆ ಸೇರಿದವು ಇದರ ಜೊತೆಗೆ ಈ ಹಿಂದೆ ವಿವಿಧ ಸಂಪುಟಗಳಲ್ಲಿ ಪ್ರಕಟಗೊಂಡಿರುವ ಶಾಸನಗಳನ್ನು ಗುರುತಿಸಿ ಅವುಗಳ ಈಗಿನ ಸ್ಥಿತಿಯನ್ನೂ ಪರಿಶೀಲಿಸಲಾಗಿದೆ.

2020 ರಿಂದ ಇಲ್ಲಿಯವರೆಗೆ ಇಲಾಖೆಯ  ಕ್ಯುರೇಟರ್ ರೇಖಾ ಅವರು ಒಟ್ಟು 46 ಹಳ್ಳಿಗಳಿಗೆ ಭೇಟಿ ನೀಡಿ, ಪತ್ತೆ ಕಾರ್ಯ ನಡೆಸಿದ್ದಾರೆ. ಶಾಸನಗಳ ಜೊತೆಗೆ ಶಿಲಾಯುಗದಿಂದ 19ನೇ ಶತಮಾನದವರೆಗಿನ ಸ್ಮಾರಕಗಳೂ ಸಿಕ್ಕಿವೆ.

ಈ ಕುರಿತು ರೇಖಾರ್ ಅವರು ಶಾಸನಗಳನ್ನು ಮೈಸೂರಿನ ವಿದ್ವಾಂಸ ಎಚ್ ಎಮ್ ನಾಗರಾಜ ರಾವ್ ಅವರು ಓದುತ್ತಿದ್ದು ಶೀಘ್ರದಲ್ಲಿ ಶಾಸನದ ಪಠ್ಯ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಅತಿ ಅಪರೂಪವೆನಿಸುವ 5 ಶಿಲಾ ಸಮಾಧಿಗಳು ಲಭ್ಯವಾಗಿದ್ದು ಸೋಮವಾರಪೇಟೆ ತಾಲೂಕಿನ ಮೋರಿಕಲ್ಲು ಗ್ರಾಮದಲ್ಲಿರುವ ಸಮಾಧಿಗಳು ಅಳಿವಿನಂಚಿನಲ್ಲಿವೆ. ಮಡಿಕೇರಿ ತಾಲೂಕಿನಲ್ಲಿರುವ 175 ಸ್ಮಾರಕಗಳ ಪೈಕಿ ಕಾಂತೂರು ಹಾಗೂ ಐಕೊಳದ ಅರಮನೆಗಳು, ಕುಗ್ಗೋಡ್ಲುವಿನ ಮಹಾವಿಷ್ಣು ದೇಗುಲ, ಕುಂದಚೇರಿಯ ಈಶ್ವರ ದೇಗುಲ, ಸಿಂಗತ್ತೂರಿನ ಮಹಾವಿಷ್ಣು ದೇಗುಲ, ಕುಯ್ಯಂಗೇರಿಯ ಶ್ರೀ ವಿಷ್ಣು ದೇವಾಲಯಗಳನ್ನು ತುರ್ತಾಗಿ ಸಂರಕ್ಷಿಸಬೇಕು ಎಂದು ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೋರಿದ್ದಾರೆ.

ಕೊಡಗಿನಲ್ಲಿ ಮಾತ್ರವೇ ಕಂಡು ಬರುವ ಕೋಲೆಕಲ್ಲುಗಳು (ಮೃತಪಟ್ಟ ಹಿರಿಯರ ನೆನಪಿಗೆ ನೆಡುವ ಕಲ್ಲು) ಹೆಚ್ಚಿನ ಪ್ರಮಾಣದಲ್ಲಿ ಶೋಧನೆ ವೇಳೆ ಸಿಕ್ಕಿವೆ. ಸೋಮವಾರಪೇಟೆ ತಾಲೂಕಿನಲ್ಲಿ 246 ಕೊಲೆಕಲ್ಲುಗಳು ಸಿಕ್ಕಿದ್ದರೆ, ಕುಶಾಲನಗರ ತಾಲೂಕಿನಲ್ಲಿ 21 ಕೋಲೆಕಲ್ಲುಗಳು ಸಿಕ್ಕಿವೆ. ಇದರೊಂದಿಗೆ 12 ವೀರ ಗಲ್ಲುಗಳು, 11 ಸತಿ ಕಲ್ಲುಗಳು, 5 ಶಿಲಾ ಶಿಲ್ಪಗಳು ಸಿಕ್ಕಿವೆ. ಇದರೊಂದಿಗೆ 15 ಗ್ರಾಮಗಳ ಸ್ಮಾರಕಗಳು ಅಪಾಯದಂಚಿನಲ್ಲಿವೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.