ಮನೆ ರಾಜ್ಯ ನಂಜನಗೂಡು ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಗೆ ಕಂಚಿನ ಪದಕ

ನಂಜನಗೂಡು ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಗೆ ಕಂಚಿನ ಪದಕ

0

ನಂಜನಗೂಡು: ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಿಲ್ಲೆಗೆ ಕಂಚಿನ ಪದಕ ಒಲಿದು ಬಂದಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಾಲ್ಲೂಕಿನ ಕೋಡಿಮೋಳೆ ಗ್ರಾಮದ ನಿವಾಸಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶಿವನಂಜಶೆಟ್ಟಿ ಜಾವಲಿನ್ ಥ್ರೋ ನಲ್ಲಿ ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶಿವನಂಜಶೆಟ್ಟಿ ನ್ಯಾಷನಲ್ ಕಮಿಟಿಯಿಂದ ಆಯ್ಕೆಯಾಗಿ ಮಲೇಷ್ಯಾದಲ್ಲಿ ಕೌಲಾಲಂಪುರದಲ್ಲಿ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸೆ.17 ರಂದು ಆಯೋಜಿಸಿದ್ದ100 ಮತ್ತು 200 ಮೀಟರ್ ಓಟದ ಸ್ಪರ್ಧೆ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ಶಿವನಂಜಶೆಟ್ಟಿ 5 ನೇ ಸ್ಥಾನ ಪಡೆದಿದ್ದಾರೆ.

ಉತ್ತಮ ಸೇವಕ

ಇನ್ ಸ್ಪೆಕ್ಟರ್ ಶಿವನಂಜಶೆಟ್ಟಿ ಕ್ರೀಡಾಪಟುವಾಗಿ ಮಾತ್ರವಲ್ಲದೇ, ಆರಕ್ಷಕ ಸೇವೆಗೂ ಗೌರವಕ್ಕೆ ಭಾಜನರಾಗಿದ್ದಾರೆ. ಸಾಲಿಗ್ರಾಮ ಠಾಣೆಯಲ್ಲಿ ಇದ್ದಾಗ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಇಲಾಖೆಯಿಂದ ನಗದು ಬಹುಮಾನ ಮತ್ತು ಪ್ರಶಸ್ತಿ ಪಡೆದುಕೊಂಡಿದ್ದರು. ವಲಯ ಮಟ್ಟದಲ್ಲಿ ಅತ್ಯುತ್ತಮ ಸಮಗ್ರ ತನಿಖಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ತಾಲ್ಲೂಕಿನ ಕೋಡಿಮೋಳೆ ಗ್ರಾಮದ ದಿವಂಗತ ಸುಬ್ಬಶೆಟ್ಟಿ ಮತ್ತು ಜಯಮ್ಮ ದಂಪತಿಯ ಪುತ್ರರಾಗಿದ್ದು, ಮಿಂಚಿನ ಓಟಗಾರರೆಂದೇ ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಸ್ವಗ್ರಾಮ ಕೋಡಿಮೋಳೆಯಿಂದ 2 ಮೈಲಿ ದೂರ ಇದ್ದ ಚಂದಕವಾಡಿ ಸರ್ಕಾರಿ ಶಾಲೆಗೆ ಪ್ರತಿದಿನ ಓಡಿ ಹೋಗುವುದು ಮತ್ತು ಓಡಿ ಬರುವುದನ್ನು ರೂಢಿಸಿಕೊಂಡಿದ್ದರು. ಅದೇ ರೂಢಿ ಈಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾರಣವಾಗಿದೆ.

ಪೊಲೀಸ್ ವೃತ್ತಿಯೊಂದಿಗೆ ಕ್ರೀಡೆಯಲ್ಲಿ ತೊಡಗಿಕೊಂಡಿದ್ದೇನೆ. ಮುಂಜಾನೆ ಓಟ ಅಭ್ಯಾಸ ಗಳನ್ನು ಮಾಡಿ ಕೆಲಸಕ್ಕೆ ಹಾಜರಾಗುತ್ತೇನೆ. ದುಶ್ಚಟಗಳ ಅಭ್ಯಾಸವಿಲ್ಲದೇ ಇದ್ದರೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು.
–       ಶಿವನಂಜಶೆಟ್ಟಿ, ನಂಜನಗೂಡು ಪೊಲೀಸ್ ಠಾಣೆ ಇನ್ ಸ್ಪೆಕ್ಟರ್

ಜೆಎಸ್ ಎಸ್ ಕಾಲೇಜಿನಲ್ಲಿ ಪಿಯುಸಿ, ಕೆಎಸ್ ಒಯು ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದು, ಈ ನಡುವೆ 1996 ರಲ್ಲಿ ಕಾನ್ ಸ್ಟೆಬಲ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು 2007ರಲ್ಲಿ ಪಿಎಸ್ ಐ ಪರೀಕ್ಷೆ ಪಾಸ್ ಆದರೂ ಕ್ರೀಡೆಯ ಮೇಲಿನ ಒಲವು ಸ್ವಲ್ಪವು ಕಡಿಮೆಯಾಗಲಿಲ್ಲ.

ಮೈಸೂರು ನಗರದಲ್ಲಿ ಕಾನ್ ಸ್ಟೆಬಲ್ ಆಗಿ ನೇಮಕ

ಪಿಎಸ್ ಐ ಪರೀಕ್ಷೆ ಪಾಸ್ ಆದ ಮೇಲೆ ಚಿತ್ರದುರ್ಗದಲ್ಲಿ ಪ್ರೊಬೇಷನರಿ ಸಾಲಿಗ್ರಾಮದಲ್ಲಿ ನಿಯೋಜನೆ ಬಳಿಕ ಬಳ್ಳಾರಿ, ಮೈಸೂರು ನಗರ, ಹೊಸದುರ್ಗದಲ್ಲಿ ಕೆಲಸ ಮಾಡಿದರೂ ಓಟದ ಅಭ್ಯಾಸವನ್ನು ಮುಂದುವರೆಸಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದರು. ನಂತರ ಬಡ್ತಿ ಪಡೆದು ರಾಮನಗರದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ನಂಜನಗೂಡಿನ ಗ್ರಾಮಾಂತರ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದಾರೆ. ಒತ್ತಡವೇ ತುಂಬಿ ತುಳುಕುತ್ತಿರುವ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕ್ರೀಡೆ ಮೇಲಿನ ಆಸಕ್ತಿಯನ್ನು ಶಿವನಂಜಶೆಟ್ಟಿ ಕುಂದಿಸಿಕೊಳ್ಳಲಿಲ್ಲ. ರಾಜ್ಯದ ಹಲವು ಜಿಲ್ಲೆಗಳಿಗೆ ವರ್ಗಾವಣೆಯಾದರೂ ತನ್ನೊಳಗಿನ ಕ್ರೀಡಾಪಟುವನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಯ ಕ್ರೀಡಾಕೂಟಗಳು, ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಶಿವನಂಜಶೆಟ್ಟಿ ಪ್ರಶಸ್ತಿಗಳಿಸಿದ್ದಾರೆ. ಇದರ ಪ್ರತಿಫಲವಾಗಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದಾರೆ.

ಇನ್ನು ಕ್ರೀಡೆಯಲ್ಲಿ ಓಟದ ಸ್ಪರ್ಧೆ ಮಾತ್ರವಲ್ಲದೇ ಷಟಲ್ ಮತ್ತು ಬ್ಯಾಡ್ಮಿಂಟನ್ ಆಟಗಾರರಾಗಿಯೂ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಚಂಡೀಗಢದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಶಿವನಂಜಶೆಟ್ಟಿ ಭಾಗವಹಿಸಿದ್ದರು.