ಮನೆ ರಾಜ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 15 ಜಿಂಕೆಗಳ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 15 ಜಿಂಕೆಗಳ ಸಾವು

0

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದು ವಾರದಲ್ಲಿ ಬರೋಬ್ಬರಿ 15 ಜಿಂಕೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ಕೆಲ ದಿನಗಳ ಹಿಂದೆಯಷ್ಟೆ ಸೋಂಕಿಗೆ ತುತ್ತಾಗಿದ್ದ 7 ಚಿರತೆಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೇ ಜಿಂಕೆಗಳ ಸಾವು ಆತಂಕ ಮೂಡಿಸಿದೆ.

ನಗರದ ಸೆಂಟ್ ಜಾನ್ ಆಸ್ಪತ್ರೆ ಬಳಿ ಸಾಕಲಾಗಿದ್ದ 28 ಜಿಂಕೆಗಳನ್ನು ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್​ ಗೆ 15 ದಿನಗಳ ಹಿಂದೆ ತರಲಾಗಿತ್ತು. ಅದಕ್ಕೂ ಮೊದಲು ಉದ್ಯಾನವನದ ವೈದ್ಯಕೀಯ ತಂಡ ಪರಿಶೀಲಿಸಿ, ಜಿಂಕೆಗಳನ್ನು ಕ್ವಾರಂಟೈನ್’ಗೆ ಒಳಪಡಿಸಲಾಗಿತ್ತು.

ಹೊರಗಡೆಯಿಂದ ಯಾವುದೇ ಪ್ರಾಣಿಗಳು ಉದ್ಯಾನವನ ಪ್ರವೇಶಿಸಲು ಪ್ರೊಟೋಕಾಲ್ ಇದ್ದು, ಕನಿಷ್ಠ ಒಂದು ತಿಂಗಳು ಕ್ವಾರಂಟೈನ್ ಮಾಡಬೇಕು. ಜೊತೆಗೆ ಯಾವುದೇ ರೋಗ ಇಲ್ಲ ಆರೋಗ್ಯಕರವಾಗಿವೆ ಎಂದ ಬಳಿಕವಷ್ಟೇ ಸಫಾರಿ ಸೇರಿದಂತೆ ಇತರ ಪ್ರಾಣಿಗಳ ಜೊತೆ ಬಿಡಬೇಕು ಎಂಬ ನಿಯಮ ಇದೆ.

ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಈ ಕುರಿತು ಪ್ರತಿಕ್ರಿಯಿಸಿ, ಜಿಂಕೆಗಳನ್ನು ಕರೆತಂದ ಮೊದಲ ದಿನವೇ ಪರಸ್ಪರ ಜಗಳವಾಡಿ ತೀವ್ರವಾಗಿ ಗಾಯಗೊಂಡದ್ದವು. ಈ ವೇಳೆ 5 ಜಿಂಕೆಗಳ ಸಾವನ್ನಪ್ಪಿದ್ದವು. ಬಳಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅಲ್ಲಿ ಕರುಳಿನಲ್ಲಿ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಸೋಂಕು ದೇಹದ ಎಲ್ಲೆಡೆ ಹರಡಲು ಆರಂಭಿಸಿದ್ದು, ಜಿಂಕೆಗಳು ಸಾಯಲಾರಂಭಿಸಿದ್ದವು ಎಂದು ಹೇಳಿದ್ದಾರೆ.

ಕ್ಲೋಸ್ಟ್ರಿಡಿಯಮ್ ಬ್ಯಾಕ್ಟೀರಿಯಾದ ಸೋಂಕಿನ ಪ್ರಕರಣಗಳು ಮಾನ್ಸೂನ್ ಸಮಯದಲ್ಲಿ ಕುರಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹುಲ್ಲಿನ ಚಿಗುರುಗಳಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಇದನ್ನು ಸೇವಿಸಿದ ಪ್ರಾಣಿಗಳಲ್ಲಿ ಲಿವರ್ ಸಿರೋಸಿಸ್ ಕಾಣಿಸಿಕೊಳ್ಳುತ್ತವೆ ಎಂದು ಪಶವೈದ್ಯರು ಹೇಳಿದ್ದಾರೆ.

ಅರಣ್ಯ ಇಲಾಖೆಯು 1980ರ ದಶಕದಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ನಾಲ್ಕು ಜಿಂಕೆಗಳನ್ನು ಹಸ್ತಾಂತರಿಸಿತ್ತು. ಈ ಜಿಂಕೆಗಳ ಸಂಖ್ಯೆ 38ಕ್ಕೆ ಏರಿಕೆಯಾಗಿತ್ತು. ಈ ಜಿಂಕೆಗಳು ದುರ್ಬಲವಾಗಿದ್ದವು. 23 ಜಿಂಕೆಗಳು ರಕ್ತಹೀನತೆ ಹಾಗೂ ದುರ್ಬಲ ಸಮಸ್ಯೆಯಿಂದ ಬಳಲುತ್ತಿದ್ದವು. ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಂಕೆಗಳು ಸಾಯುವ ಸಾಧ್ಯತೆಗಳಿವೆ ಎಂದು ಬಿಬಿಪಿ ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣೆಯಲ್ಲಿರುವ ಜಿಂಕೆಗಳ ಕ್ವಾರಂಟೈನ್ ಮುಂದುವರೆದಿವೆ.