ಬೆಂಗಳೂರು: ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ ಚಿನ್ನ, ನಗದು, ಠೇವಣಿ ಹಣ ಸೇರಿದಂತೆ ಒಟ್ಟು 2 ಕೋಟಿಗೂ ಹೆಚ್ಚು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಈ ವಂಚನೆ ಪ್ರಕರಣದಲ್ಲಿ ಇನ್ನೂ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನು ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್ ಪಿನ್ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 1 ಕೋಟಿ 8 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಚೈತ್ರಾಳ ಬಾವ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಅವರ ಸಹಾಯದಿಂದ ಹಣ ಠೇವಣಿ ಇಟ್ಟಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆ, ಚೈತ್ರಾಳ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದರು.
ಇನ್ನು ವಂಚನೆ ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ಮನೆಯಲ್ಲೂ 45 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು. ಚೈತ್ರಾಳ ಸ್ನೇಹಿತನಾಗಿರುವ ಶ್ರೀಕಾಂತ್ ಮನೆಯಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದಾಗ 45 ಲಕ್ಷ ರೂಪಾಯಿ ಹಣ ಸಿಕ್ಕಿತ್ತು ಎಂದು ಮಾಹಿತಿ ನೀಡಿದರು.
ಇನ್ನು ಪ್ರಕರಣದ ಎರಡನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಒಡಿಶಾದ ಕಟಕ್ ನಲ್ಲಿ ಸಿಕ್ಕಿಬಿದ್ದಿದ್ದು, ಇದೀಗ ಸ್ವಾಮೀಜಿಯ ವಿಚಾರಣೆ ತೀವ್ರಗೊಳಿಸಿದ್ದಾರೆ. ಸ್ವಾಮೀಜಿ ಅಕೌಂಟ್ ನಲ್ಲಿ ಇರುವ ಹಣ ಹಾಗೂ ಇತರೆ ಮಾಹಿತಿಗಳ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಲಶ್ರೀಗೆ ಒಂದು ಕೋಟಿ ಐವತ್ತು ಲಕ್ಷ ಹಣ ನೀಡಲಾಗಿತ್ತು ಎನ್ನುವ ಆರೋಪವಿದೆ. ಈ ಪೈಕಿ ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಈಗ ಐವತ್ತಾರು ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಉಳಿದ 44 ಲಕ್ಷ ರೂಪಾಯಿ ಬಗ್ಗೆ ತನಿಖೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.