ಮನೆ ರಾಜಕೀಯ ಸರ್ಕಾರಕ್ಕೆ ತಾಕತ್ತಿದ್ರೆ ಎಸ್‌ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ

ಸರ್ಕಾರಕ್ಕೆ ತಾಕತ್ತಿದ್ರೆ ಎಸ್‌ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ

0

ಹುಬ್ಬಳ್ಳಿ (Hubli)- ರಾಜ್ಯ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ರೆ ಎಸ್‌ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಸವಾಲು ಹಾಕಿದ್ದಾರೆ.
ಇಂದು ಬಾದಾಮಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ತಾಕತ್ತಿದ್ರೆ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸಲಿ ಎಂದರು‌.
ರಾಜ್ಯದಲ್ಲಿ ಕೆಲವು ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೇಡ ಅಂದವರು ಯಾರು? ದಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಿ. ಅದು ಎಸ್‌ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್, ಬಜರಂಗದಳ ಯಾವುದೇ ಆಗಿರಲಿ ಮೊದಲು ನಿಷೇಧಿಸಿ. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದು ಹೇಳಿದರು.
ಶಾಂತಿ ಕಾಪಾಡಲು ಅಗತ್ಯವಿರುವ ಕೆಲಸಗಳನ್ನು ಮಾಡಿ. ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಹುಬ್ಬಳ್ಳಿ ಗಲಭೆಯನ್ನು ಖಂಡಿಸಿದ ಸಿದ್ದರಾಮಯ್ಯ, ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು, ನಿರಾಪರಾಧಿಗಳ ಮೇಲೆ ಕ್ರಮ ಬೇಡ ಎಂದು ಹೇಳಿದ್ದೀನಿ ಎಂದರು.