ಮನೆ Breaking News ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ, ಮದ್ದೂರ್ ಬಂದ್

ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ, ಮದ್ದೂರ್ ಬಂದ್

0

ಮಂಡ್ಯ: ಸುಪ್ರೀಂ ಆದೇಶ ವಿರೋಧಿಸಿ ರೈತ, ಕನ್ನಡ ಪರ ಸಂಘಟನೆಗಳಿಂದ ಮಂಡ್ಯ, ಮದ್ದೂರು ಬಂದ್ ಗೆ ಕರೆ ನೀಡಲಾಗಿದ್ದು, ಬೆಳಿಗ್ಗೆ 8ಗಂಟೆಯಿಂದ ಸಂಜೆ 6ಗಂಟೆಗೆ ವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಲಿವೆ.

ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರು ಸಂಘ‌ಗಳ ಬಂದ್ ಗೆ ಬೆಂಬಲ ಘೋಷಿಸಿದ್ದು, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ.

ಬೆಳಿಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ  ಮಾಡಲಾಗಿದೆ.

ರಸ್ತೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಸುಟ್ಟು ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.

ಮಾಜಿ MLC ಕೆ ಟಿ ಶ್ರೀಕಂಠೇಗೌಡ ನೇತೃತ್ವದಲ್ಲಿ ಅಂಗಡಿ ಮುಚ್ಚಲು ಸೂಚನೆ ನೀಡಲಾಗಿದ್ದು, ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಲು ಮನವಿ ಮಾಡಲಾಗಿದೆ. ಇದೇ ವೇಳೆ ಪ್ರತಿಭಟನಾಕಾರರು ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ್ದಾರೆ.

ಮಂಡ್ಯದ ಸಂಜಯ ವೃತ್ತದಲ್ಲಿ ಬೆಂ-ಮೈ ಹಳೇ ಹೆದ್ದಾರಿ ತಡೆದು ರಸ್ತೆಯಲ್ಲೇ ಮಲಗಿ, ಉರುಳು ಸೇವೆ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ಮೋಸ ಮಾಡಿ ನೀರು ಬಿಟ್ಟಿದ್ದಾರೆಂದು ಬಾಯಿ ಬಾಯಿ ಬಡಿದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರ, ಸುಪ್ರೀಂ ಕೋರ್ಟ್ ವಿರುದ್ಧಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದ್ದಾರೆ.

ಹೆಚ್ ಡಿಕೆ, ಸಿ.ಟಿ.ರವಿ ಭಾಗಿ

ಇಂದಿನ ರೈತರ ಹೋರಾಟದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ರೈತರೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ. ಇವರಿಗೆ ಮಾಜಿ ಸಚಿವ ಸಿ.ಟಿ.ರವಿ, ಮಂಡ್ಯದ ಜೆಡಿಎಸ್ ಮಾಜಿ ಶಾಸಕರು, ಕಾಂಗ್ರೆಸ್ ನ ಕೆಲ ನಾಯಕರು ಹೋರಾಟಕ್ಕೆ ಸಾಥ್ ನೀಡಲಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಮಂಡ್ಯ, ಮದ್ದೂರು ಬಂದ್ ಹಿನ್ನೆಲೆ ಎರಡು ನಗರಗಳಲ್ಲಿ ಖಾಕಿ ಅಲರ್ಟ್ ಆಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಅಹಿತಕರ ಘಟನೆ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಎಸ್ ಪಿ, ಎ ಎಸ್ ಪಿ, ಮೂವರು ಡಿವೈ ಎಸ್ ಪಿ , ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರು ಹಾಗೂ ಜೊತೆಗೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿ  ನಿಯೋಜನೆ ಮಾಡಲಾಗಿದೆ.

ಮದ್ದೂರು ಪಟ್ಟಣ ಬಂದ್

ಮಂಡ್ಯ ನಗರ ಜೊತೆಗೆ ಮದ್ದೂರು ಬಂದ್‌ಗೆ ರೈತ, ಕನ್ನಡ, ಪ್ರಗತಿಪರ ಸಂಘನೆಗಳು ಕರೆ ನೀಡಿದ್ದು, ಪೇಟೆ ಬೀದಿ ಅಂಗಡಿ ಮುಂಗಟ್ಟು ಕ್ಲೋಸ್ ಆಗಿದೆ. ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್ ತೆರೆದಿದೆ.

ಮದ್ದೂರಿನಲ್ಲಿ ವರ್ತಕರ ಸಂಘ ಬಂದ್ ಗೆ ಬೆಂಬಲ ಘೋಷಿಸಿವೆ. ಆಟೋ, ಖಾಸಗಿ ಬಸ್ ಓಡಾಟ ನಿಲ್ಲಿಸಲಾಗಿದೆ. ಬಹುತೇಕ  ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾವೇರಿ ಹೋರಾಟಕ್ಕೆ ಧುಮುಕಿದ ಕಾಲೇಜು ವಿದ್ಯಾರ್ಥಿಗಳು

ಮದ್ದೂರು ಪಟ್ಟಣದ ಹೆಚ್.ಕೆ.ವೀರಣ್ಣಗೌಡ ಕಾಲೇಜು ವಿದ್ಯಾರ್ಥಿಗಳು ಮದ್ದೂರು ಬಂದ್ ಗೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಪ್ರಗತಿಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.