ಕೋಳಿ ಸಾಕಾಣಿಕೆ (ಪೌಲ್ಟ್ರಿ ಫಾರಂ) ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದನ್ನು ವಾಣಿಜ್ಯ ಚಟುವಟಿಕೆ ಎಂಬುದಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ತನ್ನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಿಗೆ ವಿಧಿಸಿದ್ದ ಗ್ರಾಮ ಪಂಚಾಯಿತಿ ಕ್ರಮ ಪ್ರಶ್ನಿಸಿ ಬೆಂಗಳೂರು ಉತ್ತರ ತಾಲ್ಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಕೆ ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದಕ್ಕಾಗಿ ಕಟ್ಟಡ ನಿರ್ಮಾಣ ಸಲುವಾಗಿ ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇ. ಭಾಸ್ಕರ್ ರಾವ್ ಪ್ರಕರಣವನ್ನು ಹೈಕೋರ್ಟ್ ಉಲ್ಲೇಖಿಸಿದೆ.
ಕೋಳಿ ಸಾಕಾಣಿಕೆ ಕೇಂದ್ರಕ್ಕಾಗಿ ನಿರ್ಮಾಣ ಮಾಡುವ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್ ಕಾಯಿದೆ ಷೆಡ್ಯೂಲ್ 4 ರ (ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ ಹಾಗೂ ಕೋಳಿ ಸಾಕಾಣಿಕೆ ಕೇಂದ್ರ ಇರುವ ಭೂಮಿ ಕೃಷಿ ಭೂಮಿಯಾಗಿಯೇ ಮುಂದುವರೆಯಲಿದ್ದು, ಅದನ್ನು ವಾಣಿಜ್ಯ ಭೂಮಿಯನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂಪಾಯಿಗಳನ್ನು ಹಿಂದಿರುಗಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ಜಾರಿ ಮಾಡಿದ್ದ ನೋಟಿಸ್ ಅನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಕೆ ನರಸಿಂಹಮೂರ್ತಿ ಅವರು ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಸಂದ್ರ ಎಂಬ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದು, ಈ ಭಾಗದಲ್ಲಿ ಕೋಳಿ ಸಾಕಾಣಿಕೆ ಮಾಡುವ ಸಲುವಾಗಿ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ವಿದ್ಯುತ್ ಸಂಪರ್ಕ ಪಡೆಯುವುದಕ್ಕಾಗಿ ನಿರಾಕ್ಷೇಪಣಾ ಪತ್ರಕ್ಕಾಗಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಮನವಿ ಪರಿಗಣಿಸಿದ್ದ ಪಂಚಾಯಿತಿ ಅಧಿಕಾರಿಯು ಕೋಳಿ ಸಾಕಾಣಿಕೆ ಕೇಂದ್ರವು ಕೈಗಾರಿಕೆಗಳ ಅಡಿಯಲ್ಲಿ ಬರಲಿದ್ದು, ನಿರಾಕ್ಷೇಪಣಾ ಪತ್ರ ವಿತರಣೆ ಮಾಡುವುದಕ್ಕಾಗಿ 1.3 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಸೂಚನೆ ನೀಡಿ ನೋಟಿಸ್ ನೀಡಿದ್ದರು. ಇದರಿಂದ ಅರ್ಜಿದಾರ 59,551 ಪಾವತಿ ಮಾಡಿದ್ದರು.
ಆನಂತರ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆಗಳಾಗಿದ್ದು, ಇದಕ್ಕಾಗಿ ನಿರಾಕ್ಷೇಪಣಾ ಪತ್ರ ಪಡೆಯುವುದು ಹಾಗೂ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಈ ರೀತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಂಶ ಮನಗಂಡು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.