ಮನೆ ಸುದ್ದಿ ಜಾಲ 11 ರಾಜ್ಯಗಳ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ಸಂಪರ್ಕಿಸುವ 9 ‘ವಂದೇ ಭಾರತ್​ ಎಕ್ಸ್‌ಪ್ರೆಸ್‌’...

11 ರಾಜ್ಯಗಳ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ಸಂಪರ್ಕಿಸುವ 9 ‘ವಂದೇ ಭಾರತ್​ ಎಕ್ಸ್‌ಪ್ರೆಸ್‌’ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

0

ನವದೆಹಲಿ: ದೇಶದ 11 ರಾಜ್ಯಗಳ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಗಳನ್ನು ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಈ ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್​ ರಾಜ್ಯಗಳಲ್ಲಿ ಸಂಚರಿಸಲಿವೆ. ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್‌ ನೀಡಲಿದ್ದಾರೆ.

ಇಂದು ಉದ್ಘಾಟನೆಯಾಗಿ ನಾಳೆಯಿಂದ ಅಧಿಕೃತವಾಗಿ ಸಂಚಾರ ಆರಂಭಿಸಲಿರುವ ಹೈದರಾಬಾದ್-ಬೆಂಗಳೂರು ರೈಲು ಕರ್ನಾಟಕದ 3ನೇ ವಂದೇ ಭಾರತ್ ಎಕ್ಸ್‌ಪ್ರೆಸ್‌​ ರೈಲು ಆಗಿದೆ. ಈಗಾಗಲೇ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡದ ಮಧ್ಯೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಸಂಚಾರ ನಡೆಸುತ್ತಿದೆ. ಈ ಮೂರೂ ರೈಲುಗಳು ಬೆಂಗಳೂರು ಮಹಾನಗರಕ್ಕೆ ಸಂಪರ್ಕ ಕಲ್ಪಿಸುತ್ತವೆ.

ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್, ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್, ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್, ವಿಜಯವಾಡ-ಚೆನ್ನೈ (ರೇಣಿಗುಂಟಾ ಮೂಲಕ) ವಂದೇ ಭಾರತ್ ಎಕ್ಸ್‌ಪ್ರೆಸ್, ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್, ರೂರ್ಕೆಲಾ-ಭುವನೇಶ್ವರ್-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್, ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜಾಮ್‌ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್. ವಂದೇ ಭಾರತ್ ರೈಲುಗಳು ತಮ್ಮ ಪ್ರಯಾಣದ ಮಾರ್ಗಗಳಲ್ಲಿ ಸಂಚರಿಸುವ ಅತ್ಯಂತ ವೇಗದ ರೈಲುಗಳಾಗಿರುತ್ತವೆ. ಇವು ಪ್ರಯಾಣಿಕರ ಪ್ರಯಾಣದ ಸಮಯ ಉಳಿಸಲು ನೆರವಾಗುತ್ತವೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ಮಾಹಿತಿ ನೀಡಿದೆ.

ಇದೇ ಮಾರ್ಗದಲ್ಲಿ ಚಲಿಸುವ ಪ್ರಸ್ತುತ ವೇಗದ ರೈಲುಗಳಿಗೆ ಹೋಲಿಸಿದರೆ, ರೂರ್ಕೆಲಾ- ಭುವನೇಶ್ವರ್-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸುಮಾರು 3 ಗಂಟೆಗಳಷ್ಟು ಹೆಚ್ಚು ವೇಗ ಪಡೆಯಲಿದೆ. ಹಾಗೆಯೇ ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 2.50 ಗಂಟೆ, ತಿರುನಲ್ವೇಲಿ-ಮದುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ 2 ಗಂಟೆಗಳಿಗೂ ಹೆಚ್ಚು, ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜಾಮ್‌ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 1 ಗಂಟೆ ಮತ್ತು ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು ಅರ್ಧ ಗಂಟೆ ಹೆಚ್ಚು ವೇಗವಾಗಿ ಚಲಿಸುತ್ತವೆ ಎಂದು ತಿಳಿಸಿದೆ.