ಮನೆ ರಾಜ್ಯ ಬೆಂಗಳೂರು:  ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿ 670 ಕೇಸ್ ದಾಖಲು,...

ಬೆಂಗಳೂರು:  ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿ 670 ಕೇಸ್ ದಾಖಲು, ₹3.36 ಲಕ್ಷ ದಂಡ ವಸೂಲಿ

0

ಬೆಂಗಳೂರು: ನಗರದಲ್ಲಿ ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಂದ ಪದೇ ಪದೇ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಗಿಳಿದಿದ್ದರು. ಈ ಮೂಲಕ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಸೆ.14ರಿಂದ 23ರವರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 670 ಪ್ರಕರಣ ದಾಖಲಿಸಿಕೊಂಡು, 3.36 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ.

ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯುತ್ತಿದ್ದ ಆಟೋ ಚಾಲಕರಿಗೆ ಪೊಲೀಸರು ದಂಡದ ಬರೆ ಎಳೆದಿದ್ದಾರೆ. ಈಶಾನ್ಯ ಉಪ ವಿಭಾಗದಲ್ಲಿ ಹೆಚ್ಚು ಹಣ ಪಡೆದ ಆರೋಪದಡಿ ಒಟ್ಟು 141 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, 72,000 ರೂ ದಂಡ ಹಾಕಲಾಗಿದೆ. ಉತ್ತರ ಉಪ ವಿಭಾಗದಲ್ಲಿ 213 ಆಟೋ ಚಾಲಕರ ವಿರುದ್ಧ ಕೇಸ್ ದಾಖಲಿಸಿ, 1.06 ಲಕ್ಷ ರೂ ದಂಡ ಸಂಗ್ರಹಿಸಲಾಗಿದೆ.

ಈಶಾನ್ಯ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬರದ 95 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು 47,500 ರೂ ದಂಡ ವಿಧಿಸಲಾಗಿದೆ. ಉತ್ತರ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬರದ 221 ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿ, 1.10 ಲಕ್ಷ ದಂಡ ವಿಧಿಸಲಾಗಿದೆ. 10 ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 670 ಪ್ರಕರಣ ದಾಖಲಿಸಿಕೊಂಡು 3.36 ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ಸಂಚಾರಿ ಉತ್ತರ ವಿಭಾಗದ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಲ ತಿಂಗಳ ಹಿಂದೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕನೋರ್ವ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ನಡೆದಿತ್ತು. ಆನ್ಲೈನ್​​ನಲ್ಲಿ ಪ್ರಯಾಣಿಕ ಆಟೋ ಬುಕ್ ಮಾಡಿದ್ದರು. ಆದ್ರೆ ಆಟೋ ಚಾಲಕ ಕರೆ ಮಾಡಿ ಬುಕಿಂಗ್ ಕ್ಯಾನ್ಸಲ್ ಮಾಡಿ ಆಫ್​ಲೈನ್​ನಲ್ಲಿ ಬರುವಂತೆ ಕೋರಿದ್ದರು. ಇದಕ್ಕೆ ಪ್ರಯಾಣಿಕ ಒಪ್ಪದಿದ್ದಾಗ ಚಾಲಕ ಹಲ್ಲೆ ನಡೆಸಿದ್ದ ಎಂಬ ಆರೋಪ ಕೇಳಿಬಂದಿತ್ತು.

ಪ್ರಯಾಣಿಕ ಮೇಲೆ ಚಾಲಕ ಆಟೋ ಹತ್ತಿಸಿ, ಹಲ್ಲೆ ಮಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ಪೊಲೀಸರಿಗೆ ಪ್ರಯಾಣಿಕ ದೂರು ನೀಡಿದ್ದರು. ​