ಮನೆ ರಾಜ್ಯ ಹಾಲು ಒಕ್ಕೂಟದಲ್ಲಿ ಒಂದು ಹುದ್ದೆಗೆ 25 ರಿಂದ 50 ಲಕ್ಷ ರೂ. ವರೆಗೆ ಲಂಚ: ಎಚ್.ಡಿ.ಕುಮಾರಸ್ವಾಮಿ

ಹಾಲು ಒಕ್ಕೂಟದಲ್ಲಿ ಒಂದು ಹುದ್ದೆಗೆ 25 ರಿಂದ 50 ಲಕ್ಷ ರೂ. ವರೆಗೆ ಲಂಚ: ಎಚ್.ಡಿ.ಕುಮಾರಸ್ವಾಮಿ

0

ಬೀದರ್ (Bidar): ಪಿಎಸ್‌ಐ ನೇಮಕಾತಿಯಲ್ಲಿ ಮಾತ್ರವಲ್ಲ ಹಾಲು ಒಕ್ಕೂಟದಲ್ಲಿ ಪ್ರತಿಯೊಂದು ಹುದ್ದೆಯ ‌ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ ನಡೆಯುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ (Former Chief Minister) ಎಚ್‌.ಡಿ.ಕುಮಾರಸ್ವಾಮಿ (H.D.Kumarswamy) ಆರೋಪಿಸಿದ್ದಾರೆ.

ಬೀದರ್ ತಾಲ್ಲೂಕಿನ ಕಾಶೆಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಒಕ್ಕೂಟದಲ್ಲಿ ಒಂದು ಹುದ್ದೆ ಪಡೆಯಬೇಕಾದರೆ 25 ಲಕ್ಷ ರೂ. ನಿಂದ 50 ಲಕ್ಷ ರೂ.ವರೆಗೆ ಕೊಡುವ ಪರಿಸ್ಥಿತಿ ಇದೆ. ಎಲ್ಲ ಇಲಾಖೆಗಳಲ್ಲಿಯೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮೀಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶವನ್ನು ಜನರ ಮುಂದೆ ಇಡಲಿ ಎಂದು ಒತ್ತಾಯಿಸಿದರು.

ಕೆಪಿಎಸ್‌ಸಿ ಮೂಲಕ ನಡೆಯುವ ಎ.ಸಿ, ಡಿವೈಎಸ್‌ಪಿ ಹುದ್ದೆ ನೇಮಕಾತಿಯಲ್ಲಿ 1 ಕೋಟಿ ಕೇಳಲಾಗುತ್ತಿದೆ. ನನ್ನ ಹತ್ತಿರ ಅನೇಕ ‌ಅಭ್ಯರ್ಥಿಗಳು ಬಂದಿದ್ದರು. ಆದರೆ, ನನ್ನ ಬಳಿ‌ ಇದೆಲ್ಲ ನಡೆಯಲ್ಲ ಎಂದು ಸ್ಪಷ್ಟವಾಗಿಯೇ ಹೇಳಿ ಕಳಿಸಿದ್ದೇನೆ ಎಂದು ತಿಳಿಸಿದರು.