ಮನೆ ಸ್ಥಳೀಯ ಗಾಂಧೀಜಿಯವರ 154 ನೇ ಜಯಂತಿ:  ಅಹಿಂಸಾ ಪ್ರತಿಪಾದಕನಿಗೆ ನಮನ

ಗಾಂಧೀಜಿಯವರ 154 ನೇ ಜಯಂತಿ:  ಅಹಿಂಸಾ ಪ್ರತಿಪಾದಕನಿಗೆ ನಮನ

0

ಮೈಸೂರು: ವಿಶ್ವ ಕಂಡ ಮಹಾನ್ ಮಾನವತಾವಾದಿ, ಸಮತೆಯ ಸಂತ, ಸರಳ ಜೀವನದ ಸಾಕಾರ ಮೂರ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 154 ನೇ ಜಯಂತಿಯನ್ನು ಭಜನೆ ಹಾಗೂ ಸರ್ವ ಧರ್ಮೀಯ ಪ್ರಾರ್ಥನೆ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಇಂದು ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಆಚರಣೆಯನ್ನು   ಗಣ್ಯರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು.

ವೇದಿಕೆಯಲ್ಲಿ ಗಾಂಧೀಜಿಯವರ  ಪ್ರಿಯ  ಪ್ರಾರ್ಥನಾ ಗೀತೆಗಳಾದ ವೈಷ್ಣವ ಜನತೋ,ರಘುಪತಿ ರಾಘವ ಗೀತೆಗಳನ್ನು ಹಾಡಲಾಯಿತು.

ಧರ್ಮಗುರುಗಳು ವಿವಿಧ ಧರ್ಮಗಳ  ಸಂದೇಶಗಳನ್ನು ತಿಳಿಸಿ ಗಾಂಧಿಯವರ ಸತ್ಯ,ಅಹಿಂಸೆ,ಶಾಂತಿ,ಸರ್ವ ಧರ್ಮ ಸಹಿಷ್ಣುತೆಯ ಗುಣಗಳನ್ನು ಅಳವಡಿಸಿಕೊಂಡರೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ  ತೋಟವಾಗಲಿದೆ ಎಂದು ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಶಾಸಕರಾದ ತನ್ವೀರ್ ಸೇಠ್ ಅವರು ವಿತರಣೆ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ಚೌಕದಲ್ಲಿರುವ ಗಾಂಧಿ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ  ಶಾಸಕರಾದ  ಶ್ರೀವತ್ಸ, ಮಹಾಪೌರರಾದ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮಹಾ ನಗರ ಪಾಲಿಕೆಯ ಆಯುಕ್ತರಾದ ಅರ್ಷದ್ ಉರ್ ರೆಹಮಾನ್ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.