ಹೈದರಾಬಾದ್: ಮಾಸ್ ಮಹಾರಾಜ ರವಿತೇಜ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾವೆಂದೇ ಹೇಳಲಾಗುತ್ತಿರುವ ʼಟೈಗರ್ ನಾಗೇಶ್ವರರಾವ್ʼ ಚಿತ್ರದ ಟ್ರೇಲರ್ ಮುಂಬಯಿಯಲ್ಲಿ ಬಿಡುಗಡೆಯಾಗಿದೆ.
ಕ್ರೈಮ್ ಲೋಕದಲ್ಲಿ ಅತ್ಯಂತ ಅಪಾಯಕಾರಿ, ಪೊಲೀಸರ ನಿದ್ದೆಗೆಡಿಸಿದ ಕುಖ್ಯಾತ ಕಳ್ಳ ʼಟೈಗರ್ ನಾಗೇಶ್ವರ ರಾವ್ʼ ಅವರ ಬಯೋಪಿಕ್ ಕಥೆಯನ್ನೊಳಗೊಂಡಿರುವ ಈ ಸಿನಿಮಾದಲ್ಲಿ ರವಿತೇಜ 70 -80 ರ ದಶಕದ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರತದ ಅಪರಾಧ ರಾಜಧಾನಿ ಸ್ಟುವರ್ಟ್ ಪುರಂನಲ್ಲಿ ನಡೆದ ನೈಜ ಘಟನೆ ಆಧಾರಿತವಾಗಿ ಈ ಸಿನಿಮಾ ಬರಲಿದ್ದು, ಇದಕ್ಕಾಗಿ ರವಿತೇಜ ಸಂಪೂರ್ಣವಾಗಿ ತನ್ನ ಲುಕ್ ನ್ನೇ ಬದಲಾಯಿಸಿಕೊಂಡಿದ್ದಾರೆ.
“ದರೋಡೆಗೆ ಧೈರ್ಯ ಮಾತ್ರ ಸಾಕಾಗುವುದಿಲ್ಲ, ಬುದ್ಧಿವಂತಿಕೆಯೂ ಬೇಕು” ಎನ್ನುವ ಡೈಲಾಗ್ಸ್ ನೊಂದಿಗೆ ಆರಂಭವಾಗುವ ಟ್ರೇಲರ್ ನಲ್ಲಿ ರವಿತೇಜ ಕುಖ್ಯಾತ ಹಾಗೂ ದುಡ್ಡಿಗಾಗಿ ಪೊಲೀಸರಿಗೆ ಸವಾಲು ಹಾಕಿ ದರೋಡೆಗೈಯುವ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಧಿಕಾರ, ಹಣ ಹಾಗೂ ಸ್ತ್ರೀ ಸುಖದ ಸುತ್ತ ಸಾಗುವ ಟೈಗರ್ ನಾಗೇಶ್ವರ ರಾವ್ ನನ್ನು ಕೂಡ ಟ್ರೇಲರ್ ಝಲಕ್ ನಲ್ಲಿ ತೋರಿಸಲಾಗಿದೆ.
ಟೈಗರ್ ನಾಗೇಶ್ವರ ರಾವ್ ಹಾರಾಟವನ್ನು ನಿಲ್ಲಿಸಲು ಬರುವ ಖಡಕ್ ಪೊಲೀಸ್ ಅಧಿಕಾರಿ, ನಟೋರಿಯಸ್ ಗ್ಯಾಂಗ್ ಸ್ಟರ್ ಗುಂಪಿನ ಮದಗಜ ಕಾಳಗವನ್ನು ಹಿನ್ನೆಲೆ ಮ್ಯೂಸಿಕ್ ನೊಂದಿಗೆ 70 ರ ದಶಕದ ದೃಶ್ಯವನ್ನು ಅದ್ಧೂರಿಯಾಗಿ ತೋರಿಸಲಾಗಿದೆ.
ಟ್ರೇಲರ್ ಕೊನೆಯಲ್ಲಿ ಟೈಗರ್ ನಾಗೇಶ್ವರ ರಾವ್ ಅವರಿಂದ ಪ್ರಧಾನಿಗೆ ಬೆದರಿಕೆ ಇದೆ ಎನ್ನುವ ಅಂಶವನ್ನು ತೋರಿಲಾಗಿದೆ. ರವಿತೇಜ ಇಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಅನುಪಮ್ ಖೇರ್ , ರೇಣು ದೇಸಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಜಿಶು ಸೆಂಗುಪ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೇ ಅಕ್ಟೋಬರ್ 20 ರಂದು ಸಿನಿಮಾ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ ಈ ಸಿನಿಮಾವನ್ನು ವಂಶಿ ನಿರ್ದೇಶನ ಮಾಡಿದ್ದು, ʼಕಾಶ್ಮೀರ್ ಫೈಲ್ಸ್ʼ, “ಕಾರ್ತಿಕೇಯ 2” ನಿರ್ಮಾಣ ಮಾಡಿದ್ದ ಅಭಿಷೇಕ್ ಅಗರ್ವಾಲ್ ಅವರು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.














