ಬೆಳಗಾವಿ: ಕರ್ನಾಟಕದಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದು, 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಮೂರು ಕೇಂದ್ರ ತಂಡಗಳು ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಲಿವೆ.
ಅದರಂತೆ ಇಂದು (ಅಕ್ಟೋಬರ್ 06) ಕೇಂದ್ರ ತಂಡ ಬೆಳಗಾವಿಯಲ್ಲಿ ಬರ ಅವಲೋಕಗೆ ಬಂದಿದ್ದು, ಈ ವೇಳೆ ರೈತನೋರ್ವ ವಿಷದ ಬಾಟಲಿ ಹಿಡಿದು ಅಧಿಕಾರಿಗಳ ಬಳಿ ಬಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಲವತ್ತು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ರೈತ ಅಪ್ಪಾಸಾಹೇಬ್ ಲಕ್ಕುಂಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ. ಬಳಿಕ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಸರ್ಕಾರ ಬರೀ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದೆ. ರೈತರಿಗೆ ಏನು ಕೊಟ್ಟಿಲ್ಲ ಎಂದು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಕಿತ್ತಿ ತೋರಿಸಿದ ರೈತ
ನೇಸರಗಿ ಗ್ರಾಮದ ಮಲ್ಲಿಕಾರ್ಜುನ ಎಂಬ ರೈತನ ಜಮೀನಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಬೆಳೆ ಪರಿಶೀಲನೆ ಮಾಡಿತು. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಗಜ್ಜರಿ(ಕ್ಯಾರೆಟ್) ಬೆಳೆ ಹಾನಿಯಾಗಿದೆ ಎಂದು ರೈತ. ಬರ ಅಧ್ಯಯನ ತಂಡಕ್ಕೆ ವಿವರಿಸಿದರು. ಪ್ರತಿ ಎಕರೆಗೆ ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದೇನೆ. ಮಳೆ ಆಗದಕ್ಕೆ ಗಜ್ಜರಿ ಬೆಳೆ ಬಂದಿಲ್ಲ ಎಂದು ಅಧಿಕಾರಿಗಳ ಜೊತೆ ರೈತ ತಮ್ಮ ಕಷ್ಟ ಹೇಳಿಕೊಂಡಿದ್ದಾನೆ.
ಅಲ್ಲದೇ ಬೆಳೆ ಕಿತ್ತಿ ಬರ ಅಧ್ಯಯನ ತಂಡಕ್ಕೆ ತೋರಿಸಿ ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ ಡಿಸಿ ನಿತೇಶ್ ಪಾಟೀಲ್ ಅವರೂ ಸಹ ರೈತರ ಕಷ್ಟಗಳನ್ನು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದರು.