ಬೆಂಗಳೂರು: ವಿವಾಹಿತ ಮಹಿಳೆಯು ಪತಿಯನ್ನು ತೊರೆದು ಪರ ಪುರುಷನೊಂದಿಗೆ ಸಹಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಪತಿಯಿಂದ ಜೀವನಾಂಶ ಕೋರುವ ಪರಿಸ್ಥಿತಿ ಉದ್ಬಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮನೆ ಬಿಟ್ಟು ಹೋದ ಪತ್ನಿಗೆ ಜೀವನಾಂಶ, ಪರಪುರುಷನೋಂದಿಗೆ ಸಹಜೀವನ ನಡೆಸುತ್ತಿರುವ ಮಹಿಳೆಗೆ ಜೀವಾನಂಶ ಕೋರುವಂತಿಲ್ಲ ಅಂತ ಮಹತ್ವದ ತೀರ್ಪು ನೀಡಿದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆಯಡಿ ತನಗೆ ಜೀವನಾಂಶ ಮಂಜೂರು ಮಾಡಿದ್ದ ಮ್ಯಾಜಿಸ್ಟ್ರೇಟ್ ಆದೇಶ ರದ್ದುಪಡಿಸಿದ್ದ ಚಿಕ್ಕಮಗಳೂರು 2ನೇ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಯ ಸಂಬಂಧ ಹೈಕೋರ್ಟ್ ಈ ಆದೇಶ ಮಾಡಿದೆ.
ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆಯು ಪತಿಯನ್ನು ತ್ಯಜಿಸಿ ಪರ ಪುರುಷನೊಂದಿಗೆ ಮನೆಬಿಟ್ಟು ಹೋಗಿದ್ದಾರೆ. ಆತನ ಒತ್ತಡದ ಮೇಲೆ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪತಿಯೊಂದಿಗೆ ಮತ್ತೆ ಸೇರುವುದಿಲ್ಲ. ಪ್ರಿಯಕರನೊಂದಿಗೇ ನೆಲೆಸುವುದಾಗಿ ಪೊಲೀಸರ ಮುಂದೆ ಅರ್ಜಿದಾರೆ ಹೇಳಿಕೆ ನೀಡಿದ್ದಾರೆ. ಇದೇ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯ ಅರ್ಜಿದಾರೆ ಮತ್ತು ಆಕೆಯ ಪತಿಯ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ ಎಂಬುದಾಗಿ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣ ಏನು.?
ಚಿಕ್ಕಮಗಳೂರಿನ ಅರ್ಜಿದಾರೆ ತನ್ನದೇ ಜಿಲ್ಲೆಯ ವ್ಯಕ್ತಿಯನ್ನು ವಿವಾಹವಾಗಿದ್ದರು. ಕೆಲ ವರ್ಷ ಸಂಸಾರ ನಡೆಸಿದ ಬಳಿಕ ಅರ್ಜಿದಾರೆ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಮನೆ ಬಿಟ್ಟು ಹೋಗಿದ್ದರು.
ಗ್ರಾಮದ ಪಂಚಾಯ್ತಿಯಲ್ಲಿ ರಾಜೀ ನಡೆಸಿ, ಪತಿ-ಪತ್ನಿಯನ್ನು ಒಂದು ಮಾಡಲಾಗಿತ್ತು. ಇದಾದ ನಂತ್ರವೂ ಪತ್ನಿ ಮನೆ ಬಿಟ್ಟು ಪ್ರಿಯಕರನೊಂದಿಗೆ ಹೋಗಿದ್ದರು. ನಂತ್ರ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದರು. ನಂತ್ರ ತನ್ನ ಸಂಬಂಧಿಕಳೊಂದಿಗೆ ಪತಿ ಅಕ್ರಮ ಸಂಬಂಧ ಹೊಂದಿದ್ದು, ತನ್ನ ಜೀವನ ನಿರ್ವಹಣೆಗೆ ಜೀವನಾಂಶ ಪಾವತಿಸಲು ಆದೇಶುವಂತೆ ಕೋರಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ರಕ್ಷಣೆ ಕಾಯ್ದೆಯಡಿ ಪರಿಹಾರ ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 2009ರಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿದ್ದ ಕೋರ್ಟ್, ಪತ್ನಿಯ ಜೀವನ ನಿರ್ವಹಣೆಗೆ ಮಾಸಿಕ 1,500 ರೂ, ಮನೆ ಬಾಡಿಗೆ 1000, ಪರಿಹಾರವಾಗಿ ಐದು ಸಾವಿರ ನೀಡುವಂತೆ ಪತಿಗೆ 2013ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದುಪಡಿಸಿ 2015ರಲ್ಲಿ ಆದೇಶ ಮಾಡಿತ್ತು.
ಇದರಿಂದ ಪತ್ನಿ 2016ರಲ್ಲಿ ಹೈಕೋರ್ಟ್ ಗೆ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ, ಜೀವನಾಂಶ ನೀಡಲು ಪತಿಗೆ ಆದೇಶಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿ, ಪರಪುರುಷನೊಂದಿಗೆ ಸಹಜೀವನ ನಡೆಸುತ್ತಿರುವ ಮಹಿಳೆ ಜೀವನಾಂಶ ಕೋರುವಂತಿಲ್ಲ ಅಂತ ಮಹತ್ವದ ಆದೇಶ ಮಾಡಿದೆ.