ಮನೆ ಸ್ಥಳೀಯ ದಸರಾ-2023: ಅ.16ರಿಂದ 22ರವರೆಗೆ ‘ಚಲನಚಿತ್ರೋತ್ಸವ’

ದಸರಾ-2023: ಅ.16ರಿಂದ 22ರವರೆಗೆ ‘ಚಲನಚಿತ್ರೋತ್ಸವ’

0

ಮೈಸೂರು: ಮೈಸೂರು ದಸರಾ ಅಂಗವಾಗಿ ಇಲ್ಲಿನ ಎಂ.ಜಿ. ರಸ್ತೆಯ ಮಾಲ್‌ ಆಫ್‌ ಮೈಸೂರ್‌ನ ಐನಾಕ್ಸ್‌ ಹಾಗೂ ಜಯಲಕ್ಷ್ಮಿಪುರಂನ ಬಿಎಂ ಹ್ಯಾಬಿಟೆಟ್ ಮಾಲ್‌ ನಲ್ಲಿರುವ ಡಿಆರ್‌ ಸಿಯಲ್ಲಿ ಅ.16ರಿಂದ 22ರವರೆಗೆ ‘ಚಲನಚಿತ್ರೋತ್ಸವ’ ಹಮ್ಮಿಕೊಳ್ಳಲಾಗಿದೆ.

ಮೈಸೂರು ದಸರಾ ಚಲನಚಿತ್ರೋತ್ಸವದ ಪ್ರಚಾರ ಸಾಮಗ್ರಿಯನ್ನು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಂ.ಕೆ. ಸವಿತಾ ಸೋಮವಾರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಎಂ.ಕೆ.ಸವಿತಾ, ಒಟ್ಟು 4 ಪರದೆಗಳಲ್ಲಿ ಸದಭಿರುಚಿಯ, ಸಾಮಾಜಿಕ ಸಂದೇಶ ಸಾರುವ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ 112 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಉದ್ಘಾಟನೆ ಸಮಾರಂಭವನ್ನು ಅ.15ರಂದು ಬೆಳಿಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ನೆರವೇರಿಸುವರು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ತಾರಾ ದಂಪತಿ ಕೃಷ್ಣ–ಮಿಲನಾ ನಾಗರಾಜ್‌, ನಟಿಯರಾದ ಮಾನ್ವಿತಾ ಕಾಮತ್, ಮಯೂರಿ ಹಾಗೂ ವೈಭವಿ ಶಾಂಡಿಲ್ಯ ಭಾಗವಹಿಸಲಿದ್ದಾರೆ. ‘ಹಾಸ್ಯ ಚಕ್ರವರ್ತಿ’ ಎಂದೇ ಖ್ಯಾತಿ ಗಳಿಸಿದ್ದ ನಟ ನರಸಿಂಹರಾಜು ಅವರ 100ನೇ ಜನ್ಮ ದಿನದ ಅಂಗವಾಗಿ ಅವರ ಪುತ್ರಿ ಸುಧಾ ನರಸಿಂಹರಾಜು ಅವರನ್ನು ಗೌರವಿಸಲಾಗುವುದು. ಅಂದು ಬೆಳಿಗ್ಗೆ 10ರಿಂದ ಚಲನಚಿತ್ರ ಸಂಗೀತ ನಿರ್ದೇಶಕ, ನಟ ಸಾಧುಕೋಕಿಲಾ ಹಾಗೂ ತಂಡದಿಂದ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಮೇರು ನಟರಾದ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್ ಹಾಗೂ ಶಂಕರ್‌ನಾಗ್ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಮಕ್ಕಳ ಸಿನಿಮಾಗಳೂ ಇರಲಿವೆ. ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳ ನಿರ್ದೇಶಕರೊಂದಿಗೆ ಸಂವಾದಕ್ಕೆ ಅವಕಾಶವಿದೆ. ಇನ್ನೂ ತೆರೆ ಕಾಣದ ಐದು ಚಲನಚಿತ್ರಗಳನ್ನೂ ಪ್ರದರ್ಶಿಸಲಾಗುವುದು’ ಎಂದರು.

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಂಬಂಧ ನಡೆಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ದ ಹತ್ತನ್ನು ಪ್ರದರ್ಶಿಸಲಾಗುವುದು. ಅ.20ರಂದು ಐನಾಕ್ಸ್‌ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲ ಮೂರು ಬಹುಮಾನಗಳನ್ನು ನೀಡಲಾಗುವುದು. ಅತ್ಯುತ್ತಮ ಸಂಕಲನ, ಛಾಯಾಗ್ರಹಣ ಮಾಡಿದವರಿಗೂ ಬಹುಮಾನ ಕೊಡಲಾಗುವುದು. ಈ ಕಾರ್ಯಕ್ರಮದಲ್ಲಿ ನಟಿ ಮಿಲನಾ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

 ‘ನರಸಿಂಹರಾಜು ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸತ್ಯಹರಿಶ್ಚಂದ್ರ ಮತ್ತು ಶ್ರೀಕೃಷ್ಣದೇವರಾಯ ಚಲನಚಿತ್ರವನ್ನು ಪ್ರದರ್ಶಿಸಿ ಅವರಿಗೆ ಗೌರವ ಸಲ್ಲಿಸಲಾಗುವುದು’ ಎಂದರು.

ಪಾಸ್‌ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ₹ 500 ಹಾಗೂ ವಿದ್ಯಾರ್ಥಿಗಳಿಗೆ ₹ 300 ನಿಗದಿಪಡಿಸಲಾಗಿದೆ. ಈ ಪಾಸ್ ಪಡೆದವರು ಎಲ್ಲ ಸಿನಿಮಾಗಳನ್ನೂ ವೀಕ್ಷಿಸಬಹುದಾಗಿದೆ. ಜೊತೆಗೆ, ಸಿನಿಮಾಗಳ ಮಾಹಿತಿಯ ಕಿರುಹೊತ್ತಿಗೆ ನೀಡಲಾಗುವುದು. ಅ.10ರಿಂದ ಆನ್‌ಲೈನ್‌ನಲ್ಲೂ ಟಿಕೆಟ್ ಖರೀದಿಗೆ ಅವಕಾಶವಿದೆ. ದಿನದ ಪಾಸ್‌ ಅನ್ನು ₹100ಕ್ಕೆ ಕೊಡಲಾಗುವುದು. ರಿಯಾಯಿತಿ ದರದಲ್ಲಿ ಸಿನಿಮಾ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ’ ಎಂದು ತಿಳಿಸಿದರು.

ಉಪ ಸಮಿತಿಯ ಕಾರ್ಯಾಧ್ಯಕ್ಷೆ ವಿ. ಪ್ರಿಯದರ್ಶಿನಿ, ಕಾರ್ಯದರ್ಶಿ ಅಶೋಕ್‌ಕುಮಾರ್‌ ಡಿ. ಹಾಗೂ ಸಹ ಕಾರ್ಯದರ್ಶಿ ಹರೀಶ್ ಟಿ.ಕೆ. ಇದ್ದರು.