ಮನೆ ರಾಜ್ಯ ನಮ್ಮ ಅವಧಿಯಲ್ಲಿ ನಿಯಮಗಳ ಪ್ರಕಾರವೇ ಕಾರ್ಯ ನಿರ್ವಹಿಸಲಾಗಿದೆ, ಗೊಡ್ಡು ಬೆದರಿಕೆಗೆ ಕಿವಿಗೊಡುವ ಮಾತಿಲ್ಲ: ಮಾಜಿ ಸಿಎಂ...

ನಮ್ಮ ಅವಧಿಯಲ್ಲಿ ನಿಯಮಗಳ ಪ್ರಕಾರವೇ ಕಾರ್ಯ ನಿರ್ವಹಿಸಲಾಗಿದೆ, ಗೊಡ್ಡು ಬೆದರಿಕೆಗೆ ಕಿವಿಗೊಡುವ ಮಾತಿಲ್ಲ: ಮಾಜಿ ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ನರಗುಂದ ಸೇರಿದಂತೆ ಯಾವುದೇ ಕ್ಷೇತ್ರಗಳ ಕಾಮಗಾರಿಗಳ ಬಗ್ಗೆ ತನಿಖೆ ಮಾಡಲಿ. ನಮ್ಮ ಅವಧಿಯಲ್ಲಿ ನಿಯಮಗಳ ಪ್ರಕಾರವೇ ಕಾರ್ಯ ನಿರ್ವಹಿಸಲಾಗಿದ್ದು, ಪೂರ್ಣಗೊಂಡ ಕಾಮಗಾರಿಗಳಿಗೆ ಕೆಲವಕ್ಕೆ ಬಿಲ್  ಕೊಡಲಾಗಿದೆ. ಇಂತಹ ಗೊಡ್ಡು ಬೆದರಿಕೆಗೆ ಕಿವಿಗೊಡುವ ಮಾತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ತನಿಖೆಯಾಗಲಿ, ಬೇಡ ಅಂದವರು ಯಾರು? ನಮ್ಮ ಅವಧಿಯಲ್ಲಿ ಮುಗಿದಿದ್ದ ಕಾಮಗಾರಿಗಳಿಗೆ ಬಿಲ್ ಪಾವತಿ ಕೂಡ ಮಾಡಲಾಗಿದೆ. ಆದರೆ ಮುಗಿದಿರುವ ಕೆಲ ಕಾಮಗಾರಿಗಳಿಗೆ ಇಂದಿನ ಕಾಂಗ್ರೆಸ್ ಸರಕಾರದಿಂದ ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲು ಬಿಲ್ ಪಾವತಿ ಮಾಡಿ ನಂತರ ತನಿಖೆ ಮಾಡಿಸಲಿ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಯೋಜನೆಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಬರ, ಕಾವೇರಿ ಸೇರಿದಂತೆ ಪ್ರತಿಯೊಂದಕ್ಕೂ ಕೇಂದ್ರತ್ತ ಬೊಟ್ಟು ತೋರಿಸುತ್ತಿದ್ದಾರೆ. ಈಗ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಇದಕ್ಕೆ ಕೇಂದ್ರ ಸರಕಾರ ಕಾರಣವೇ? ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಿಯಾದ ಕಲ್ಲಿದ್ದಲು ಪೂರೈಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ತಮ್ಮ ಹಣಕಾಸಿನ ದುಸ್ಥಿತಿಗೆ ಅಸಮರ್ಪಕ ಕೆಲಸದಿಂದ ವಿದ್ಯುತ್ ಅಭಾವ ಬಿಗಡಾಯಿಸಿದೆ ಎಂದು ವಾಗ್ದಾಳಿ ನಡೆಸಿದರು.