ಮನೆ ಕಾನೂನು “ಶಿಕ್ಷಣ ಉಳ್ಳವರಿಗೆ ಮಾತ್ರವೇ?” ಹೈಕೋರ್ಟ್ ಪ್ರಶ್ನೆ; ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗೆ ಅಸಮಾಧಾನ

“ಶಿಕ್ಷಣ ಉಳ್ಳವರಿಗೆ ಮಾತ್ರವೇ?” ಹೈಕೋರ್ಟ್ ಪ್ರಶ್ನೆ; ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗೆ ಅಸಮಾಧಾನ

0

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಮುತುವರ್ಜಿ ತೋರದೇ ಇರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪರಿಸ್ಥಿತಿ ಹೀಗೆ ಮುಂದುವರೆಯಲು ಬಿಡುವುದರಿಂದ ಖಾಸಗಿ ಶಾಲೆಗಳ ಮಾಲೀಕರಿಗೆ ಬೆಂಬಲ ನೀಡಿದಂತಾಗುತ್ತದೆ. ಎರಡು ಹೊತ್ತಿನ ಊಟ ಮಾಡಲು ಸಂಪಾದನೆಯಿಲ್ಲದ ವ್ಯಕ್ತಿಯು ತನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿಲು ತನ್ನ ಊಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಇಂತಹ ಪರಿಸ್ಥಿತಿ ಸೃಷ್ಟಿಸುವ ಮೂಲಕ ನಾವು ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಸೃಷ್ಟಿಸುತ್ತಿಲ್ಲವೇ? ಇಂದು ಉಳ್ಳವರು ಮೌಲಸೌಲಭ್ಯ ಪಡೆಯುತ್ತಾರೆ. ಇಲ್ಲದವರಿಗೆ ಏನೂ ಇಲ್ಲ. ಇದು ನಿಜಕ್ಕೂ ದುರದೃಷ್ಟಕರ ಎಂದು ಪೀಠ ಅತೃಪ್ತಿ ವ್ಯಕ್ತಪಡಿಸಿತು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು 80 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಗೊತ್ತಾಗಿದ್ದು, 55 ಅನ್ನು ಸಮೀಕ್ಷೆ ಒಳಪಡಿಸಲಾಗಿದೆ. ಅವುಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ದೃಢವಾಗಿದೆ ಎಂದು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.

ಸಾಕಷ್ಟು ಸೌಲಭ್ಯಗಳು ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೇ ವಿಧಿ ಇಲ್ಲವಾಗಿದೆ. ಆ ಮೂಲಕ ಸಂವಿಧಾನದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವುದರ ಹಿಂದಿನ ಉದ್ದೇಶಕ್ಕೆ ಸೋಲಾಗುತ್ತಿದೆ ಎಂಬ ಅಮಿಕಸ್ ಕ್ಯೂರಿ ಮತ್ತು ಅರ್ಜಿದಾರರ ಪರ ವಕೀಲರ ವಾದಕ್ಕೆ ಪೀಠ ಸಹಮತ ವ್ಯಕ್ತಪಡಿಸಿದೆ.

ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಅವರಿಗೆ ಮೂಲಸೌಲಭ್ಯ ನಿರಾಕರಿಸುವ ಮೂಲಕ ರಾಜ್ಯ ಸರ್ಕಾರವು ಪರೋಕ್ಷವಾಗಿ ಖಾಸಗಿ ಶಾಲೆಯ ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಪೀಠವು ಸರ್ಕಾರಕ್ಕೆ ಚಾಟಿ ಬೀಸಿತು.

 “ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಎಂಬುದಕ್ಕೆ ಸಂಶೋಧನೆ ಮಾಡಬೇಕಿಲ್ಲ. ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರಿಗೆ ಆಯ್ಕೆ ನೀಡಿದರೆ ಖಂಡಿತವಾಗಿಯೂ ಅವರು ಅತ್ತ ಸುಳಿಯುವುದಿಲ್ಲ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಯಾರೂ ಒಪ್ಪುವುದಿಲ್ಲ. ಅಗತ್ಯ ಇರುವವರಿಗೆ ಇದು ಸಮಸ್ಯೆಯಾಗಿದ್ದು, ಉಳಿದವರಿಗೆ ಸಮಸ್ಯೆಯಲ್ಲ. ಹಾಗಾದರೆ, ಶಿಕ್ಷಣವು ಉಳಿದವರಿಗೆ ಮಾತ್ರವೇ ಸೀಮಿತವೇ?” ಎಂದು ಪೀಠವು ಕಟುವಾಗಿ ಸರ್ಕಾರವನ್ನು ಪ್ರಶ್ನಿಸಿತು.

“ಸಮಾಜದ ತಳವರ್ಗದ ಜನರ ಮಕ್ಕಳು ರಾಜ್ಯದಲ್ಲಿ ಶಿಕ್ಷಣ ಪಡೆಯಬಾರದೇ? ಉಳ್ಳವರಿಗೆ ಮಾತ್ರವೇ ಶಿಕ್ಷಣವೇ? ಹಣವಿದ್ದವರು ತಮ್ಮ ಮಕ್ಕಳನ್ನು ಎಲ್ಲಾ ಸೌಲಭ್ಯಗಳು ಇರುವ ಒಳ್ಳೆಯ ಶಾಲೆಗೆ ಸೇರಿಸಬಹುದು. ಹಣವಿಲ್ಲದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಾಗಿಲ್ಲ? ಇದು ಇಷ್ಟೇ” ಎಂದು ಪೀಠವು ಅಸಮಾಧಾನ ಸೂಚಿಸಿತು.

“ಎರಡೊತ್ತಿನ ಊಟಕ್ಕೆ ಸಂಕಟಪಡುವವರು ಅದನ್ನೂ ತ್ಯಾಗ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸಬೇಕಿದೆ. ಆ ಮೂಲಕ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಸೃಷ್ಟಿಯಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿ, ಖಾಸಗಿ ಶಾಲೆಗಳನ್ನು ಉದ್ಧಾರ ಮಾಡಲಾಗುತ್ತಿದೆ. ಕಾನೂನಿನ ಪ್ರಕಾರ ಅವರಿಗೆ ಅನುಮತಿ ಕಲ್ಪಿಸಿದ್ದರೆ ಅವರು ಶಾಲೆ ತೆರೆಯಬಹುದು. ಹಾಗೆಂದು ಸಮಾಜದ ಇತರೆ ವರ್ಗದ ಜನರಿಗೆ ಶಿಕ್ಷಣ ಪಡೆಯಲು ಅವಕಾಶ ಇಲ್ಲ ಎಂದಲ್ಲ. ಅದನ್ನು ನಾವು ಮಾಡುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.

“ಶಿಕ್ಷಣದಿಂದ ಸಮಾನತೆ ಸಾಧಿಸಲು ಸಾಧ್ಯ. ಈ ಕಾರಣಕ್ಕಾಗಿಯೇ ನಾವು ಡಾ. ಅಂಬೇಡ್ಕರ್ ಅವರನ್ನು ಪುಸ್ತಕ ಹಿಡಿದಿರುವ ರೀತಿಯಲ್ಲಿ ಕಾಣುತ್ತೇವೆ. ಪುಸ್ತಕ ಇಲ್ಲದ ಅಂಬೇಡ್ಕರ್ ಅವರ ಪುತ್ಥಳಿ ಅಥವಾ ಚಿತ್ರವನ್ನು ನೋಡಿದ್ದೀರಾ? ಏಕೆಂದರೆ ಶಿಕ್ಷಣ ಬಹಳ ಮುಖ್ಯ. ನೀವು ಉಚಿತ ಬಸ್ ಸೇವೆ ನೀಡುತ್ತಿದ್ದೀರಿ. ನಾವು ಅದಕ್ಕೆ ವಿರೋಧಿಸುವುದಿಲ್ಲ. ಆದರೆ, ಶಿಕ್ಷಣ ಅತ್ಯಗತ್ಯ” ಎಂದು ನ್ಯಾಯಾಲಯ ಹೇಳಿತು.

ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲು ಎಂಟು ವಾರ ಕಾಲಾವಕಾಶ ಬೇಕು. ಆ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸಲಾಗುವುದು. ಆನಂತರ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವರಿಗೆ ಮಾಡಿಕೊಡಲಾಗುವುದು ಎಂದು ಸರ್ಕಾರದ ವಕೀಲರು ತಿಳಿಸಿದರು. ಇದಕ್ಕೆ ಅನುಮತಿಸಿದ ಪೀಠವು ಅದರರ್ಥ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಕಲ್ಪಿಸಬಾರದು ಎಂದಲ್ಲ ಎಂದಿದೆ.

ಎರಡು ತಿಂಗಳಲ್ಲಿ ರಾಜ್ಯ ಸರ್ಕಾರವು ಸಮೀಕ್ಷೆ ಪೂರ್ಣಗೊಳಿಸಬೇಕು. ಇದಕ್ಕೆ ಮತ್ತೆ ಕಾಲಾವಕಾಶ ವಿಸ್ತರಿಸುವುದಿಲ್ಲ. ತನ್ನ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಲಾಗಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಮತ್ತೆ ಕಾಲಾವಕಾಶ ವಿಸ್ತರಿಸುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.