ಮನೆ ಯೋಗಾಸನ ಸಾಧನಾ (ಮುಕ್ತಿಗೆ ಮಾರ್ಗ)

ಸಾಧನಾ (ಮುಕ್ತಿಗೆ ಮಾರ್ಗ)

0

ಯೋಗದ ಎಲ್ಲಾ ಕೃತಿಗಳೂ ಸಾಧನ ಅಥವಾ ಅಭ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತದೆ. ಸಾಧನೆಯೆಂದರೆ ಪುಸ್ತಕಗಳನ್ನ ಔಪಚಾರಿಕವಾಗಿ ಓದುವುದಲ್ಲ; ಅದೊಂದು ಆಧ್ಯಾತ್ಮಿಕ ತಪಸ್ಸು. ಎಣ್ಣೆಯನ್ನು ಹೊಂದಿರುವ ಬೀಜಗಳನ್ನ ಹಿಂಡಿದರೆ ಮಾತ್ರ ಎಣ್ಣೆ ಬರುತ್ತದೆ. ಮರಗಳನ್ನು ಬೆಳಗಿಸಿ ಪ್ರಜ್ವಲಿಸಿದರೆ ಮಾತ್ರ ಒಣಗಿದ್ದ ಜ್ವಾಲೆ ಹೊರಬರುತ್ತದೆ. ಅದೇ ರೀತಿ ಸಾಧಕನ ತನ್ನೊಳಗಿನ ದೈವಿಕ ಜ್ವಾಲೆಯನ್ನು ನಿರಂತರ ಅಭ್ಯಾಸದಿಂದ ಜನಿಸುವಂತೆ ಮಾಡಬೇಕು. ಈ ಭಾವವನ್ನೊಳಗೊಂಡ ಹಠಯೋಗಪ್ರದೀಪಿಕೆಯ ಪ್ರಥಮೋಪದೇಶದಲ್ಲಿಯ ಶ್ಲೋಕಗಳು ಈ ಮುಂದಿನಂತಿವೆ :


ಯುವಾ ವೃದ್ದೋsತಿವೃದ್ದೋವಾ ವ್ಯಾಧಿತೋ ದುರ್ಲಲೋsಪಿ ವಾ |
ಅಭ್ಯಾಸಾತ್ ಸಿದ್ದಿಮಾಪ್ನೋತಿ ಸರ್ವಯೋಗೆಷ್ವತಂದ್ರಿತಃ ||
ಕ್ರಿಯಾಯುಕ್ತಸ್ಯ ಸಿದ್ದಿಃಸ್ಯಾತ್ ಅಕ್ತಿಯಸ್ಯ ಕಥಂ ಭವೇಶ್ |
ನ ಶಾಸ್ತ್ರಪಾಠಮಾತ್ರೇಣ ಯೋಗಸಿದ್ದಿಃ ಪ್ರಜಾಯತೇ ||
ನ ವೇಷಧಾರಣಂ ಸಿದ್ಧೇಃ ಕಾರಣಂ ನ ಚ ತತ್ಯಥಾ |
ಕ್ರಿಯೈವ ಕಾರಣಂ ಸಿದ್ಧೇಃ ಸತ್ಯಮೇತತ್ ನ ಸಂಶಯಃ ||
__ಹಠಯೋಗಪ್ರದೀಪಿಕೆ ೬೪-೬೬

“ಸತತ ಅಭ್ಯಾಸದಿಂದ ಯುವಕರೂ, ಮುದುಕರೂ ಅತಿ ವಯಸ್ಸಾದವರೂ ಅನಾರೋಗ್ಯದವರು ಅಥವಾ ದೇಹವಿಕಲರೂ ಯಾರೇ ಆದರೂ ಪರಿಪೂರ್ಣತೆಯನ್ನು ಹೊಂದಬಹುದು. ಜಯವು ಅಭ್ಯಾಸ ಶೀಲನಿಗೆ ಮಾತ್ರ ದೊರಕುವುದೇ ವಿನಾ ಅನಭ್ಯಾಸಿಗೆ ಅಲ್ಲ. ಓದುವುದರಿಂದ ಯೋಗದಲ್ಲಿ ಜಯ ಲಭಿಸುವುದಿಲ್ಲ. ಸನ್ಯಾಸಿಯು ಅಥವಾ ಯೋಗಿಯ ವೇಷ ಹಾಕಿದೊಡನೆ, ಅಥವಾ ಅವರ ವಿಚಾರವಾಗಿ ಮಾತನಾಡಿದ ಒಡನೆಯೇ ಯೋಗಿಯಾಗುವುದಿಲ್ಲ. ಸತತ ಅಭ್ಯಾಸವೇ ಜಯದ ಗುಟ್ಟು. ಇದು ಸತ್ಯ. ಇದರಲ್ಲಿ ಸಂದೇಹವಿಲ್ಲ.
“ಅಕ್ಷರಗಳನ್ನು ಕಲಿತು ಸತತ ಅಭ್ಯಾಸದ ಮೂಲಕ ಎಲ್ಲ ವಿದ್ಯೆಗಳನ್ನೂ ಕಲಿತುಕೊಳ್ಳುವಂತೆ, ವಿಶ್ವ ವ್ಯಾಪಕನಾದ ಪರಮಾತ್ಮನೊಂದಿಗೆ ಅದ್ವೈತವೆನಿಸುವ ಆತ್ಮಜ್ಞಾನವನ್ನು ಅಥವಾ ತತ್ತ್ವ ಜ್ಞಾನವನ್ನು ದೈಹಿಕ ಶಿಕ್ಷಣದಿಂದ ಸಂಪಾದಿಸಬಹುದು.” (ಘೇರಂಡಸಂಹಿತಾ ೧-೫)
ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ಪರಸ್ಪರ ಅನ್ಯೋನ್ಯ ಸಾಧನೆಯಿಂದ ಒಬ್ಬನು ಆಂತರಿಕ ಶಾಂತಿಯೆಂಬ ಲಾಭವನ್ನೂ, ಸೃಷ್ಟಿಕರ್ತೃವಿನೊಡನೆ ಸಮಾಗಮನವನ್ನೂ ಪಡೆಯಬಹುದು. ಜೀವನದ ಅತ್ಯುತ್ತಮ ಸಾಧನೆಯೆಂದರೆ ಸೃಷ್ಟಿಕರ್ತನೆಡೆಗೆ ಹೋಗುವುದು. ಅದನ್ನು ಸಾಧಿಸಲು ಆತನಿಗೆ ಅಗತ್ಯವಾದದ್ದು ದೇಹದ, ಇಂದ್ರಿಯಗಳ, ಮನಸ್ಸಿನ, ಬುದ್ಧಿಯ ಮತ್ತು ಆತ್ಮನ ಸಂಘಟಿತ ಚಟುವಟಿಕೆ. ಈ ಸಂಘಟನೆ ಇಲ್ಲದಿದ್ದರೆ ಸಫಲತೆ ಸಿಗದು. ಕಠೋಪನಿಷತ್ತಿನ ಮೊದಲ ಭಾಗದ ಮೂರನೇ ವಲ್ಲಿಯಲ್ಲಿ ಯಮನು ಈ ಯೋಗವನ್ನು ನಚಿಕೇತನಿಗೆ ರಥಿಕನ ಉಪಾಖ್ಯಾನದ ಮೂಲಕ ಈ ಬಗೆಯಲ್ಲಿ ತಿಳಿಸುತ್ತಾನೆ :

ಆತ್ಮಾನಾಂ ರಥಿನಂ ವಿದ್ಧಿ ಶರೀರಂ ರಥಮೇವ ತು |
ಬುದ್ದಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ತು ||
ಇಂದ್ರಿಯಾಣಿ ಹಯಾನ್ಯಾಹುಃ ವಿಷಯಾಂಸ್ತೇಷು ಹೋಚರಾನ್ |
ಆತ್ಮೇಂದ್ರಿಯ ಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ||
ಯಸ್ತ್ವ ವಿಜ್ಞಾನವಾನ್ ಭವತಿ ಆಯುಕ್ತೇನ ಮನಸಾ ಸದಾ |
ತಸ್ಯೆಂದ್ರಿಯಾಣವಶ್ಯಾನಿ ದುಷ್ವಾಶ್ಚಾ ಇವ ಸಾರಥೇಃ ||
ಯಸ್ತು ವಿಜ್ಞಾನವಾನ್ ಭವತಿ ಯುಕ್ತೇನ ಮನಸಾ ಸದಾ |
ತಸ್ಯೆಂದ್ರಿಯಾಣಿ ವಶ್ಯಾನಿ ಸದಶ್ವಾ ಇವ ಸಾರಥೇಃ ||
ಯಸ್ತ್ವ ವಿಜ್ಞಾನವಾನ್ ಭವತಿ ಅಮನಸ್ಕಃ ಸದಾsಶುಚಿಃ |
ನ ಸ ತತ್ಪದಮಾಪ್ನೋತಿ ಸಂಸಾರಂ ಚಾಧಿಗಚ್ಛತಿ ||
ಯಸ್ತು ವಿಜ್ಞಾನವಾನ್ ಭವತಿ ಸಮನಸ್ಕಃ ಸದಾ ಶುಚಿಃ |
ಸ ತು ತತ್ಪದಮಾಪ್ನೋತಿ ಯಸ್ಮಾತ್ ಭೂಯೋ ನ ಜಾಯತೇ ||
__ಕಠೋಪನಿಷತ್ ೧-೩-೩ರಿಂದ ೮

“ಆತ್ಮವನ್ನು ರಥಿಕನೆಂದು ತಿಳಿ. ಬುದ್ಧಿಯನ್ನು ಸಾರಥಿಯೆಂದೂ, ಮನಸ್ಸನ್ನು ಸೂತ್ರಗಳೆಂದೂ ತಿಳಿ. ಇಂದ್ರಿಯಗಳನ್ನು ಅಶ್ವಗಳೆಂದು ಹೇಳಿದ್ದಾರೆ. ಇಂದ್ರಿಯ ವಿಷಯಗಳೇ ಅವುಗಳ ಹುಲ್ಲುಗಾವಲು. ಆತ್ಮನು ಮನಸ್ಸು ಮತ್ತು ಇಂದ್ರಿಯಗಳೊಡನೆ ಕೂಡಿದಾಗ ಆತನನ್ನು ʼಭೋಕ್ತ್ರʼ ಎಂದು ತಿಳಿದವರು ಹೇಳುತ್ತಾರೆ. ಅವಿವೇಕಿಯಾದವನೂ ಮನಸ್ಸನ್ನು ನಡೆಸಲಾರ. ಅವನ ಮನಸ್ಸು ದುಷ್ಟ ಕುದುರೆಗಳಂತೆ. ವಿವೇಕಿಗಳಾದವರು ಮನಸ್ಸನ್ನು ನಿಯಂತ್ರಣದಲ್ಲಿಟ್ಟಿರುತ್ತಾರೆ. ಅಂಥವರ ಇಂದ್ರಿಯಗಳು ಶಿಕ್ಷಣ ಹೊಂದಿದ ಕುದುರೆಗಳಂತೆ. ಅವಿವೇಕಿ ಮನಸ್ಸು ಸ್ವೇಚ್ಛೆಯಾಗಿ ತಿರುಗುವುದೇ ಅಲ್ಲದೆ, ದುರ್ವರ್ತನೆಗೂ ಒಳಗಾಗಬಹುದು. ಅವಿವೇಕಿಯು ದೇಹದಿಂದ ದೇಹಕ್ಕೆ ಸಾಗುತ್ತ ಯಾವ ಗುರಿಯನ್ನು ಮುಟ್ಟಲಾರ. ವಿವೇಕಿಯಾದವನು ಎಲ್ಲದರಲ್ಲೂ ಗಮನವಿಡುತ್ತಾನೆ. ತನ್ನ ಗುರಿಯನ್ನು ಮುಟ್ಟಿ ಜನ್ಮಗಳನ್ನು ತಡೆಯಬಲ್ಲನು. ಆತನು ಪರಮಾರ್ಥತತ್ವವನ್ನು ಮುಟ್ಟುತ್ತಾನೆ”.
ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಹೀಗಿದೆ :

ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಾಃ ಪರಂ ಮನಃ |
ಮನಸಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ ||
ಏವಂ ಬುದ್ದೇಃ ಪರಂ ಬುದ್ದ್ವಾ ಸಂಸ್ತಭ್ಯಾತ್ಮಾನಮಾತ್ಮನಾ |
ಜಹಿ ಶತ್ರುಂ ಮಹಾಬಾಹೋ ಕಾಮರೋಪಂ ದುರಾಸದಮ್ ||
__ಭ.ಗೀ. ೨-೪೨, ೪೩
“ಇಂದ್ರಿಯಾರ್ಥಗಳಿಗಿಂತ ಹೆಚ್ಚಿನವು ಇಂದ್ರಿಯಗಳು; ಅದಕ್ಕಿಂತ ಹಿರಿಯದು ಮನಸ್ಸು, ಮನಸ್ಸಿಗಿಂತ ಹಿರಿಯದು ಬುದ್ಧಿ, ಬುದ್ಧಿಗಿಂತ ಹಿರಿಯದು ಆತ್ಮ – ಎಲ್ಲದರಲ್ಲೂ ಇರುವಂತಹ ಆತ್ಮನಿಂದ ಆತ್ಮನನ್ನು ನಿಗ್ರಹಿಸು, ಮತ್ತು ಕಾಮರೂಪವಾದ ಶತ್ರುವನ್ನು ಜಯಿಸು”
ಇದನ್ನು ಸಾಧಿಸಲು ಸತತ ಪ್ರಯತ್ನವೊಂದೇ ಅಲ್ಲದೆ ತ್ಯಾಗವೂ ಬೇಕು. ತ್ಯಾಗವೆಂದರೆ ಯಾವುದನ್ನು ತ್ಯಜಿಸಬೇಕು? ಎನ್ನುವ ಪ್ರಶ್ನೆ ಬರುತ್ತದೆ. ಪ್ರಪಂಚವನ್ನು ತ್ಯಜಿಸುವುದಿಲ್ಲ. ಏಕೆಂದರೆ ಹಾಗೆ ಮಾಡಿದರೆ ದೇವರನ್ನೇ ನಿರಾಕರಿಸಿದಂತೆ. ದೇವರಿಂದ ತನ್ನನ್ನು ದೂರಕ್ಕೆ ಕೊಂಡಯ್ಯುವ ಎಲ್ಲಾವಸ್ತುಗಳನ್ನೂ ಯೋಗಿ ತ್ಯಜಿಸುತ್ತಾನೆ. ತನ್ನ ಪ್ರಚೋದನೆ ಮತ್ತು ಸತ್ಕರ್ಮಕ್ಕೆ ಸ್ಪೂರ್ತಿ ದೇವರಿಂದಲೇ ಬರುತ್ತದೆಂದು ಕಾಮವನ್ನು ವಿಸರ್ಜಿಸುತ್ತಾನೆ. ದೇವರ ಕಾರ್ಯವನ್ನು ಅಲ್ಲಗಳೆಯುವವರನ್ನೂ ಕೆಟ್ಟ ಅಭಿಪ್ರಾಯಗಳನ್ನುಳ್ಳವರನ್ನು ನೀತಿ ಮಾತುಗಳನ್ನು ಆಡಿ ಅದರಂತೆ ನಡೆಯದವರನ್ನು ಯೋಗಿಯು ತ್ಯಜಿಸುತ್ತಾನೆ.
ಯೋಗಿಯು ಕರ್ಮವನ್ನು ಬಿಡುವುದಿಲ್ಲ. ತನ್ನನ್ನು ಕರ್ಮಕ್ಕೆ ಕಟ್ಟಿ ಹಾಕುವ ಬಂಧನಗಳನ್ನು ಮಾತ್ರ ಕಡಿದು ಹಾಕುತ್ತಾನೆ ; ಕರ್ಮಫಲವನ್ನು ದೇವರಿಗಾಗಿ, ಜನರಿಗಾಗಿ ತ್ಯಜಿಸುತ್ತಾನೆ. ತನ್ನ ಕರ್ತವ್ಯ ಮಾಡುವುದಕ್ಕೆ ಮಾತ್ರ ತನಗೆ ಹಕ್ಕಿದೆಯೆಂದೂ, ಅದರ ಫಲದ ಹಕ್ಕು ತನಗಿಲ್ಲವೆಂದೂ ಆತನು ತಿಳಿಯುತ್ತಾನೆ. (ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ – ಭ. ಗೀ. ೨-೪೭)
ಇತರರು ಕರ್ತವ್ಯ ಕರೆದಾಗ, ನಿದ್ದೆ ಮಾಡಿ ಹಕ್ಕುಗಳನ್ನು ಮಾತ್ರ ಕೇಳುತ್ತಾರೆ. ಆದರೆ ಯೋಗಿಯು ಕರ್ತವ್ಯದ ಕಡೆ ಎಚ್ಚರವಾಗಿದ್ದು, ಹಕ್ಕುಗಳ ಕಡೆ ಗಮನವೀಯುವುದಿಲ್ಲ. ಆದ್ದರಿಂದ ಎಲ್ಲರಿಗೂ ಕತ್ತಲಾದಾಗ ಯೋಗಿಗೆ ಹಗಲು. (ಯಾ ನಿಶಾ ಸರ್ವ ಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ – ಭ.ಗೀ. ೨-೬೯)