ಮನೆ ರಾಜ್ಯ ಮುಖಾಮುಖಿ ರಹಿತ ನಕ್ಷೆ ಮಂಜೂರಾತಿ ನಗರಾಭಿವೃದ್ಧಿ ಇಲಾಖೆಗೆ ಈಶ್ವರ ಖಂಡ್ರೆ ಸೂಚನೆ

ಮುಖಾಮುಖಿ ರಹಿತ ನಕ್ಷೆ ಮಂಜೂರಾತಿ ನಗರಾಭಿವೃದ್ಧಿ ಇಲಾಖೆಗೆ ಈಶ್ವರ ಖಂಡ್ರೆ ಸೂಚನೆ

0

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ಬಯಸುವವರಿಗೆ ಮುಖಾಮುಖಿ ರಹಿತ (ಫೇಸ್ ಲೆಸ್) ಸೇವೆ ಒದಗಿಸಲು ತಂತ್ರಾಂಶ ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆ 2020ರ ಕಲಂ 144(6)ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸುವ ಕುರಿತ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಅಂದರೆ ಕಂದಾಯ ಭೂಮಿಯಲ್ಲಿ ಭೂಪರಿವರ್ತನೆ ಆಗದೆ,  ಬಡಾವಣೆಗೆ ಅನುಮೋದನೆ ಪಡೆಯದೆ ಮತ್ತು ಮನೆಗಳಿಗೆ ನಕ್ಷೆಯ ಮಂಜೂರಾತಿಯೂ ಇಲ್ಲದೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಮನೆಗಳಿಗೆ ಮತ್ತು ನಿವೇಶನಗಳಿಗೆ ಬಿ ವಹಿಯಲ್ಲಿ ಖಾತೆ ನೀಡುತ್ತಿರುವುದನ್ನು ಯಾವುದಾದರೂ ಒಂದು ಹಂತದಲ್ಲಿ ನಿಲ್ಲಿಸಲೇಬೇಕಾಗುತ್ತದೆ. ಹೀಗಾಗಿ ಇದಕ್ಕೆ ಪರಿಹಾರ ಹುಡಕ ಬೇಕು. ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಗಳಿಗೆ ನಕ್ಷೆ ಮಂಜೂರಾತಿ ಪಡೆದಿದ್ದರೂ ನಕ್ಷೆ ಉಲ್ಲಂಘಿಸಿ, ಹೆಚ್ಚುವರಿ ಅಂತಸ್ತು ನಿರ್ಮಿಸುವ ಮತ್ತು ಸೂಕ್ತ ಸೆಟ್ ಬ್ಯಾಕ್ ಬಿಡದೆ ನಿರ್ಮಿಲಾಗುತ್ತಿರುವ ಮನೆಗಳ ವಿರುದ್ಧ ನಿರ್ಮಾಣ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ವಾರ್ಡ್ ಹಂತದಲ್ಲಿ ಅನಧಿಕೃತವಾಗಿ ತಲೆಎತ್ತುವ ಮನೆಗಳನ್ನು ನಿಯಂತ್ರಿಸದ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲು  ಕಾನೂನಿನಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ನಿಯಮಾವಳಿಗಳ ಅಡಿಯಲ್ಲಿ ಇರುವ ಅವಕಾಶ ಬಳಸಿಕೊಳ್ಳುವ ಬಗ್ಗೆ ಕಡತ ಮಂಡಿಸುವಂತೆ ತಿಳಿಸಿದರು.

ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಸ್ವತ್ತುಗಳಿದ್ದು, ಈ ಪೈಕಿ 6 ಲಕ್ಷಕ್ಕೂ ಹೆಚ್ಚು ಬಿ ಖಾತೆ ಸ್ವತ್ತುಗಳಿವೆ. ಹಲವು ಅನಧಿಕೃತ ಬಡಾವಣೆಯಲ್ಲಿ ಮನೆ ನಿರ್ಮಿಸಿರುವವರು ಯಾವುದೇ ತೆರಿಗೆಯನ್ನೂ ಪಾವತಿಸುತ್ತಿಲ್ಲ, ಖಾತೆಯನ್ನೂ ಮಾಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದರು.

ಈ ಎಲ್ಲ ವಿಚಾರಗಳ ಬಗ್ಗೆ ಪ್ರಾಥಮಿಕ ಚರ್ಚೆಯ ಬಳಿಕ ಸಚಿವರು ಉಪ ಸಮಿತಿ ಸಭೆಯನ್ನು ಮುಂದಿನ ಗುರುವಾರಕ್ಕೆ ಮುಂದೂಡಿದರು.