ಮನೆ ರಾಜ್ಯ 6 ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಗೆ ತಾತ್ವಿಕ ಸಮ್ಮತಿ

6 ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಗೆ ತಾತ್ವಿಕ ಸಮ್ಮತಿ

0

ಬೆಂಗಳೂರು: ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿದಂತೆ 6 ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಸಂಪುಟಕ್ಕೆ ಶಿಫಾರಸು ಮಾಡುವ ಸಂಬಂಧ ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿಂದು ಉಪ ಸಮಿತಿ ಸಭೆ ತಾತ್ವಿಕ ಅನುಮೋದನೆ ನೀಡಿದೆ.

ಭಾರತ ಸರ್ಕಾರ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಮತ್ತು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಮಾರ್ಗಸೂಚಿಗಳನ್ವಯ ಈ ವಲಯದಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಚಟುವಟಿಕೆ ಮತ್ತು ನಿಷೇಧಿತ ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ ಮತ್ತು ಗೋದವರ್ಮನ್ ವಿರುದ್ಧ ಭಾರತ ಸರ್ಕಾರದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ  ಸಂರಕ್ಷಿತ ಪ್ರದೇಶಗಳಾದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯ ಜೀವಿ ಧಾಮಗಳ ಸುತ್ತಮುತ್ತ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡುವುದು ಅಗತ್ಯವಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಈ ಕೆಳಕಂಡ 6 ಅರಣ್ಯಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಸಂಬಂಧ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಸಚಿವ ಸಂಪುಟದ ಸಭೆಗೆ ಸಲ್ಲಿಸಲು ತಾತ್ವಿಕ ಅನುಮೋದನೆ ನೀಡಲಾಯಿತು.

ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ವಿಸ್ತೀರ್ಣ 244.15 ಚದರ ಕಿಲೋ ಮೀಟರ್ ಇದ್ದು, ಇದರಲ್ಲಿ ಒಟ್ಟು 322.695 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ (ಇ.ಎಸ್.ಝಡ್) ಪ್ರಸ್ತಾಪಿಸಲಾಗಿದ್ದು,  ಈ ಪೈಕಿ 23.804 ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು 298.890 ಚ.ಕಿ.ಮೀ. ಅರಣ್ಯೇತರ ಪ್ರದೇಶ ಸೇರಿದೆ.

ಬುಕ್ಕಾಪಟ್ಟಣದಲ್ಲಿ ಚಿಂಕಾರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ 136.11 ಚದರ ಕಿಲೋಮೀಟರ್ ಇದ್ದು, ಇದರ ಒಟ್ಟು ಪರಿಸರ ಸೂಕ್ಷ್ಮ ಪ್ರದೇಶ 157.0862 ಚ.ಕಿ.ಮೀ. ಪ್ರಸ್ತಾಪಿಸಲಾಗಿದ್ದು, ಅರಣ್ಯ ಪ್ರದೇಶ 18.5662 ಚ.ಕಿ.ಮೀ. ಆದರೆ, ಅರಣ್ಯೇತರ ಪ್ರದೇಶ 138.52 ಚ.ಕಿ.ಮೀ. ಎಂದು ತಿಳಿಸಲಾಯಿತು.

ಕಾಮಸಂದ್ರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ 78.62 ಚ.ಕಿ.ಮೀ. ಇದ್ದು, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 93.27 ಚ.ಕಿ.ಮೀ. ಎಂದು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಅರಣ್ಯೇತರ ಇ.ಎಸ್.ಝಡ್ ವ್ಯಾಪ್ತಿ 93.27 ಆಗಿದೆ.

ರಾಜೀವಗಾಂಧೀ ರಾಷ್ಟ್ರೀಯ ಉದ್ಯಾನವನ (ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ)ದ ಒಟ್ಟು ವಿಸ್ತೀರ್ಣ 643.39 ಚ.ಕಿ.ಮೀ. ಆಗಿದ್ದು, ಇದರ ಪರಿಸರ ಸೂಕ್ಷ್ಮ ಪ್ರದೇಶ 573.97 ಪ್ರಸ್ತಾಪಿಸಲಾಗಿದ್ದು, ಇದರಲ್ಲಿ 302.36 ಅರಣ್ಯ ಮತ್ತು 271.61 ಅರಣ್ಯೇತರ ಪ್ರದೇಶವಿದೆ ಎಂದು ತಿಳಿಸಲಾಯಿತು.

ಅದೇ ರೀತಿ ಅಣಶಿ ರಾಷ್ಟ್ರೀಯ ಉದ್ಯಾನ ಮತ್ತು ದಾಂಡಿ ವನ್ಯಜೀವಿಧಾಮದಲ್ಲಿ 669.06 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಪ್ರಸ್ತಾಪಿಸಲಾಗಿದ್ದು, 448.81 ಚ.ಕಿ.ಮೀ ಅರಣ್ಯ ಮತ್ತು 220.25 ಅರಣ್ಯೇತರ ಪ್ರದೇಶವಾಗಿದೆ.

ಕಾವೇರಿ ವಿಸ್ತರಿತ ವನ್ಯಜೀವಿ ಧಾಮದಲ್ಲಿ 53.39 ಚ.ಕಿ.ಮೀ. ಅರಣ್ಯ ವಿಸ್ತೀರ್ಣವಿದ್ದು, ಇದರಲ್ಲಿ145.369 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಪ್ರಸ್ತಾಪಿಸಲಾಗಿದೆ. ಈ ಪೈಕಿ 143.663 ಅರಣ್ಯ ಮತ್ತು 1.706 ಚ.ಕಿ.ಮೀ. ಅರಣ್ಯೇತರ ಪ್ರದೇಶವಾಗಿದೆ ಎಂದು ತಿಳಿಸಲಾಯಿತು.