ಮನೆ ಸ್ಥಳೀಯ ಅನುಮತಿ ದೊರೆತಿರುವುದು ಮಹಿಷಾ ದಸರಾಕ್ಕಲ್ಲ, ಮಹಿಷ ಉತ್ಸವಕ್ಕೆ

ಅನುಮತಿ ದೊರೆತಿರುವುದು ಮಹಿಷಾ ದಸರಾಕ್ಕಲ್ಲ, ಮಹಿಷ ಉತ್ಸವಕ್ಕೆ

0

ಮೈಸೂರು: ಮಹಿಷಾ ದಸರಾ ಆಚರಣಾ ಸಮಿತಿ ಕರೆ ನೀಡಿದ್ದ ಮಹಿಷ ದಸರಾಗೆ ಪೊಲೀಸರು  ಅನುಮತಿ ನೀಡದೇ ಮಹಿಷ ಉತ್ಸವ ಹಾಗೂ ಧಮ್ಮ ದೀಕ್ಷಾ ಸಮಾರಂಭ  ನಡೆಸಲು ಮಾತ್ರ ಅನುಮತಿ ನೀಡಿದ್ದಾರೆ.

ನಾಳೆ (ಅ.13) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಗೆ ಪುರಭವನದ ಆವರಣದಲ್ಲಿರುವ ಡಾ.ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡಿ ನಂತರ ಮಹಿಷಾ ಉತ್ಸವ ಹಾಗೂ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಸಲು ಷರತ್ತಿನ ಮೇಲೆ ಅನುಮತಿ ನೀಡಲಾಗಿದೆ.

ಷರತ್ತುಗಳೇನು ?

ಸ್ಥಳೀಯ ಪೊಲೀಸ್ ಅಧಿಕಾರಿಗಳು/ಮೇಲಾಧಿಕಾರಿಗಳು ಸಂದರ್ಭಕ್ಕೆ ಅನುಸಾರವಾಗಿ ನೀಡುವ ಸೂಚನೆಗಳನ್ನು ಪಾಲಿಸುವುದು,

ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಯಾವುದೇ ಮೆರವಣಿಗೆ, ಪ್ರತಿಭಟನೆ ನಡೆಸದೇ ನೇರವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಬೇಕು.

ಪರ, ವಿರೋಧ ಘೋಷಣೆ ಕೂಗಬಾರದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಬಾರದು.

ಕಾರ್ಯಕ್ರಮ ಸಂಬಂಧ ಯಾವುದೇ ಮೆರವಣಿಗೆ, ಪ್ರತಿಭಟನಾ ರಾಲಿ, ಬೈಕ್ ರಾಲಿ ನಡೆಸಬಾರದು.

ಚಪ್ಪರ ಅಥವಾ ವೇದಿಕೆ ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಪ್ರತ್ಯೇಕವಾದ ಅನುಮತಿ ಪಡೆದು, ನೀತಿ ನಿಯಮಗಳನ್ನು ತಪ್ಪದೇ ಪಾಲಿಸುವುದು.

ಪುರಭವನದ ಒಳ ಆವರಣ ಹೊರತುಪಡಿಸಿ 5 ಜನಕ್ಕಿಂತ ಹೆಚ್ಚಿನ ಜನ ಗುಂಪು ಸೇರಬಾರದು ಹಾಗೂ ಯಾವುದೇ ಬಹಿರಂಗ ಸಭೆ, ಸಮಾರಂಭ ನಡೆಸಬಾರದು.

ಯಾವುದೇ ಮತೀಯ, ಧಾರ್ಮಿಕ ವ್ಯಕ್ತಿಗತವಾಗಿ ಪ್ರಚೋಧನಕಾರಿಯಾಗಿ ಭಾಷಣ ಮಾಡಬಾರದು.

ಸಾರ್ವಜನಿಕ ಪ್ರಚಾರ,  ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರ ಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡಬಾರದು ಹಾಗೂ ಇನ್ನಿತರ ಚ್ಯುತಿ ತರುವಂತಹ ಕೃತ್ಯಗಳನ್ನು ಮಾಡುವಂತಿಲ್ಲ.

ಯಾವುದೇ ಗಲಾಟೆ ವಗೈರೆ ಆದದ್ದು ಕಂಡುಬಂದಲ್ಲಿ ಆಯೋಜಕರಾದ ಮಹಿಷಾ ದಸರಾ ಆಚರಣಾ ಸಮಿತಿ  ಪತ್ರದಲ್ಲಿ ಅನುಮತಿ ಕೋರಿರುವ ಅಧ್ಯಕ್ಷರು, ಸರ್ವಾಧ್ಯಕರು, ಕಾರ್ಯಾಧ್ಯಕ್ಷರು, ಸ್ವಾಗತ ಸಮಿತಿ, ಹಣಕಾಸು ಸಮಿತಿ, ಮೆರವಣಿಗೆ ಸಮಿತಿ ಮತ್ತು ಪ್ರಚಾರ ಸಮಿತಿ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.  ಮಾತ್ರವಲ್ಲದೇ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು.