ಮನೆ ಕ್ರೀಡೆ ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ

ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ

0

ಲಖನೌ (ಉತ್ತರ ಪ್ರದೇಶ): ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸತತ ಎರಡನೇ ಸೋಲು ಕಂಡಿದೆ.

ಲಖನೌದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್ ಗಳ ಸೋಲು ಕಂಡಿದೆ. ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದು, ತಂಡ ಎಲ್ಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಪಂದ್ಯ ಸವಾಲಿನಿಂದ ಕೂಡಿದ್ದು, ಸೋಲು ಎಲ್ಲರಿಗೂ ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿತು.  312 ರನ್ ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಬೌಲರ್ ಗಳು ಯಶಸ್ವಿಯಾದರು. ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ ಆಸೀಸ್ ಪಡೆಗೆ ಶಾಕ್ ಮೇಲೆ ಶಾಕ್ ನೀಡಿದರು. ಪರಿಣಾಮ 65 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್ ಗಳು ಪೆವಿಲಿಯನ್ ಸೇರಿದ್ದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ 46 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 140 ರ ಗಡಿದಾಟಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಇನ್ನು ಅಂತಿಮ ಎರಡು ವಿಕೆಟ್ ಗಳನ್ನು ತಬ್ರೇಝ್ ಶಂಸಿ ಉರುಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 40.5 ಓವರ್ ಗಳಿಗೆ 177 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು 134 ರನ್ ಗಳ ಭರ್ಜರಿ ಜಯ ಸಾಧಿಸಿತು.