ಮನೆ ರಾಜ್ಯ ಮೈಸೂರು ದಸರಾ: ಸೂಕ್ತ ಬಂದೋಬಸ್ತ್ ಗಾಗಿ 8,000 ಪೊಲೀಸರ ನಿಯೋಜನೆ

ಮೈಸೂರು ದಸರಾ: ಸೂಕ್ತ ಬಂದೋಬಸ್ತ್ ಗಾಗಿ 8,000 ಪೊಲೀಸರ ನಿಯೋಜನೆ

0

ಮೈಸೂರು: 2023ರ ಮೈಸೂರು ದಸರಾ ಮಹೋತ್ಸವಕ್ಕೆ ಬರೋಬ್ಬರಿ 8,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು.

ಇದೇ ಮೊದಲಿಗೆ ಅತಿ ಹೆಚ್ಚು ಮಂದಿ ಪೊಲೀಸರನ್ನು ನವರಾತ್ರಿ ಉತ್ಸವದ ಬಂದೋಬಸ್ತ್ ಗಾಗಿ ಬಳಸಿಕೊಳ್ಳುತ್ತಿದ್ದು, ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ.

ಸರ್ಕಾರದ ಸ್ತ್ರೀಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉಚಿತಪ್ರಯಾಣ ಸೌಲಭ್ಯ ಬಳಸಿಕೊಂಡು ದಸರೆಗೆ ಆಗಮಿಸುವ ನಿರೀಕ್ಷೆ ಇರುವುದರಿಂದ ಹಾಗೂ ಮಹಿಷಾ ದಸರಾ ಆಚರಣೆ ವಿವಾದ ಹಿನ್ನೆಲೆಯಲ್ಲಿ ಈ ವರ್ಷ ಅತಿ ಹೆಚ್ಚು ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ  ವಹಿಸಲು ಪ್ರಮುಖ ಕಾರಣವಾಗಿದೆ.

ಹೊರ ಜಿಲ್ಲೆಯಿಂದ ಒಟ್ಟು 6,000 ಸಿಬ್ಬಂದಿಯನ್ನು ದಸರಾ ಮಹೋತ್ಸವಕ್ಕೆ ಕರೆಸಿಕೊಳ್ಳಲಾಗುತ್ತಿದ್ದು, 3000 ಮಂದಿ ಗೃಹರಕ್ಷಕ ದಳ ಡಿ.ಎ.ಆರ್. ಕೆ.ಎಸ್.ಆರ್.ಪಿ ತುಕಡಿಗಳ ಪೊಲೀಸರು ಇಂದು ಮೈಸೂರು ತಲುಪಿದ್ದಾರೆ.

ಉಳಿದ 3000 ಮಂದಿ ಅ. 22 ರವರೆಗೆ ಹಂತ ಹಂತವಾಗಿ ಆಗಮಿಸುವರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ಇತ್ತೀಚಿಗಷ್ಟೇ ಮೈಸೂರಿನ ದಸರಾ ಬಂದೋಬಸ್ತ್ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ದಿನಪೂರ್ತಿ ಸಭೆ ನಡೆಸಿ ಹೆಚ್ಚುವರಿ ಭದ್ರತಾ ತುಕಡಿಗಳನ್ನು ಮಂಜೂರು ಮಾಡುವುದಾಗಿ ತಿಳಿಸಿದ್ದ ಬೆನ್ನಲ್ಲೇ ಇಂದು ಸಂಜೆವರೆಗೆ 500 ಹೋಂ ಗಾರ್ಡ್ ಗಳು ಸೇರಿದಂತೆ 3000ಮಂದಿ ಮೈಸೂರಿಗೆ ಆಗಮಿಸಿದ್ದಾರೆ.

ಹೊರಗಿನಿಂದ ಬರುವ ದಸರಾ ಬಂದೋಬಸ್ತ್ ಸಿಬ್ಬಂದಿಗೆ ಮೈಸೂರು ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿವಿ ಮಹಲ್ಲಾ, ಕೆ. ಆರ್. ಮೊಹಲ್ಲಾ ಸೇರಿದಂತೆ ಮೈಸೂರು ನಗರದಾದ್ಯಂತ ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯ, ಸಮುದಾಯ ಭವನ, ಸರ್ಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆ ಸಭಾಂಗಣಗಳಲ್ಲಿ ವಸತಿ ಊಟ ತಿಂಡಿಗೆ ವ್ಯವಸ್ಥೆ ಮಾಡಲಾಗಿದ್ದು, ಸೇನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ವಿಜಯದಶಮಿ ಮೆರವಣಿಗೆ ವೇಳೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ ಇನ್ನು 3000 ಹೆಚ್ಚುವರಿ ಪೊಲೀಸರು ಆಗಮಿಸಲಿದ್ದು ಮೈಸೂರು ನಗರದ ಸಿವಿಲ್, ಸಿಎಆರ್, ಕೆ.ಎಸ್.ಆರ್.ಪಿ ಹೋಂ ಗಾರ್ಡ್ ಗಳೂ ಸೇರಿ 2,000 ಸಿಬ್ಬಂದಿಯನ್ನು ದಸರಾ ಬಂದೋಬಸ್ತ್ ಕರ್ತವ್ಯ ನಿಯೋಜನೆಗೆ ಮಾಡಲಾಗುತ್ತಿದೆ.