ಮನೆ ರಾಜ್ಯ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ: ಅ.16 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ...

ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ: ಅ.16 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ ಬಿಜೆಪಿ

0

ಬೆಂಗಳೂರು: ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ‌(ಅ.16) ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧಾರ‌ ಮಾಡಲಾಗಿದೆ. ಈ ಹಿನ್ನಲೆ ಇಂದು(ಅ.15) ಬಿಜೆಪಿ ಕಚೇರಿಯಲ್ಲಿ‌ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಈ ವೇಳೆ ನಾಳಿನ ‌ಪ್ರತಿಭಟನೆಯ ರೂಪರೇಷೆ ಹಾಗೂ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಸಭೆಯ ಬಳಿಕ ಮಾತನಾಡಿದ ನಳಿನ್​ ಕುಮಾರ್​ ಕಟೀಲ್​ ‘ಕರ್ನಾಟಕದಲ್ಲಿ ಲೂಟಿ ಸರ್ಕಾರ ಜಾರಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಹೌದು, ಬೆಂಗಳೂರಿನಲ್ಲಿ ಸಭೆಯ ಬಳಿಕ ಮಾತನಾಡಿ ‘ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳಿಗೆ ರೇಟ್ ಫಿಕ್ಸ್​​ ಮಾಡಿದ್ದಾರೆ. ಕಲಾವಿದರಿಂದಲೂ ಕಮಿಷನ್ ಕೇಳುತ್ತಿದ್ದಾರೆ, ಇದು ಎಟಿಎಂ ಸರ್ಕಾರವಾಗಿದೆ. ಸರ್ಕಾರದ ಗುತ್ತಿಗೆದಾರರಿಗೆ 650 ಕೋಟಿ ರೂ. ಬಿಡುಗಡೆ ಮಾಡಿದೆ. ಬಿಲ್ ಪಾವತಿ ಬಳಿಕ ಐಟಿ ದಾಳಿಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್​​ ಪಕ್ಷಕ್ಕೂ ಸಂಬಂಧವಿದೆ. ಈ ಹಿನ್ನಲೆ ಸರ್ಕಾರದ ವಿರುದ್ಧ ನಾಳೆ ಮತ್ತು ನಾಡಿದ್ದು ಪ್ರತಿಭಟನೆ ಮಾಡುತ್ತೇವೆ. ನೈತಿಕ ಹೊಣೆಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇನ್ನು ಈ ಹಣ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ಜಿಲ್ಲೆಗಳಲ್ಲಿ ಮತ್ತು ನಾಡಿದ್ದು ಮಂಡಲಗಳಲ್ಲಿ ಬೃಹತ್ ಹೋರಾಟ ಮಾಡಲಿದ್ದೇವೆ ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.