ಮನೆ ಸುದ್ದಿ ಜಾಲ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ: ಎಸ್‌ಡಿಪಿಐ ಅಧ್ಯಕ್ಷ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ: ಎಸ್‌ಡಿಪಿಐ ಅಧ್ಯಕ್ಷ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

0

ಬೆಂಗಳೂರು (Bengaliru)-ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸೋಸಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಬೆಂಗಳೂರು ಘಟಕದ ಅಧ್ಯಕ್ಷ ಮೊಹಮ್ಮದ್ ಶರೀಫ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎನ್‌ಐಎ ವಿಶೇಷ ಕೋರ್ಟ್ ತಮಗೆ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮೊಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯಪೀಠ ಜಾಮೀನು ಅರ್ಜಿ ವಜಾ ಆದೇಶ ಮಾಡಿದೆ.
ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಎನ್‌ಐಎ ಪೊಲೀಸರು ಮೇಲ್ಮನವಿದಾರ ಮೊಹಮ್ಮದ್ ಶರೀಫ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಆರೋಪಿಯು ಉಗ್ರರ ತಂಡದಲ್ಲಿ ಸಕ್ರಿಯನಾಗಿದ್ದು, ಇತರೆ ಆರೋಪಿಗಳ ಜೊತೆಗೂಡಿ ಹಿಂಸಾಚಾರ ಕೃತ್ಯಗಳಿಗೆ ಪಿತೂರಿ ನಡೆಸಿದ್ದಾನೆ. ಕೆ.ಜಿ. ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‌ಡಿಪಿಐ ಸೇರಿದಂತೆ ಇತರೆ ಆರೋಪಿಗಳಿಗೆ ಸಹಕಾರ ನೀಡಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಜೊತೆಗೆ ಆರೋಪಿಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಯುಎಪಿಎ ಹೇರಲಾಗಿದೆ.
ಪ್ರಕರಣದ ಹಿನ್ನೆಲೆ:
ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಶಾಸಕ ಅಖಂಡ ಶ್ರಿನಿವಾಸ್ ಅಳಿಯ ಪಿ.ನವೀನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ 2020ರ ಆ.11ರಂದು ರಾತ್ರಿ 11ರ ವೇಳೆ ಕೆಲವರು ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಹಿಂಸಚಾರ ಸೃಷ್ಟಿಸಿದ್ದರು. ಈ ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್‌ನನ್ನು ಎನ್‌ಐಎ ಪೊಲೀಸರು ಬಂಧಿಸಿದ್ದರು.