ಸೌರಮಂಡಳದಲ್ಲಿರುವ ಆರನೆಯ ಗ್ರಹವೇ ಶನಿಗ್ರಹವಾಗಿದೆ. ಗುರು ಗ್ರಹದ ನಂತರದ ಕಕ್ಷೆಯಲ್ಲಿ ಸಂಚರಿಸುತ್ತಾ ನಿಧಾನವಾಗಿ ಅಂದರೆ 30 ವರ್ಷಗಳಲ್ಲಿ ಕೇವಲ ಒಂದು ಬಾರಿ ಸೂರ್ಯನನ್ನು ಸುತ್ತುವುದು. ಈ ಕಾರಣದಿಂದಲೇ ಇದನ್ನು “ಶನೈಶ್ಚರ” ಎಂದು ಕರೆಯಲಾಗಿದೆ. “ಶನೈಶ್ಚರ” ಎಂದರೆ ನಿಧಾನವಾಗಿ ಚಲಿಸುವವನು ಎಂದರ್ಥವಾಗಿದೆ.
ದೂರದರ್ಶಕದಿಂದ ಸರಳವಾಗಿ ಶನಿ ಗ್ರಹವನ್ನು ನೋಡಬಹುದಾಗಿದೆ. ನೀಲಿ ಬಣ್ಣದಲ್ಲಿ ಶನಿಗ್ರಹವು ಕಾಣಿಸುವುದು ಮತ್ತು ನಾಲ್ಕು ದಿಕ್ಕಿಗೆ ಮೂರು ಕಂಕಣಗಳು ಇವೆ. ಈ ಕಂಕಣಗಳು ವೇಗವಾಗಿ ತಿರುಗುತ್ತದೆ. ಆದ್ದರಿಂದ ಶನಿ ಗ್ರಹವು ಅತ್ಯಂತ ಸುಂದರವಾಗಿ ಕಾಣಿಸುವುದು. ಕವಚ ಕಂಕಣವೆಲ್ಲವೂ ಸ್ವತಂತ್ರವಾಗಿ ತಿರುಗುತ್ತಿರುತ್ತದೆ. ಶನಿಗ್ರಹವು ಸೂರ್ಯನಿಂದ 88 ಕೋಟಿ 66 ಲಕ್ಷ ಮೈಲುಗಳಷ್ಟು ದೂರದಲ್ಲಿರುವುದು. ಭೂಮಿಯಿಂದ 79 ಕೋಟಿ 10 ಲಕ್ಷ ಮೈಲು ದೂರವಿರುವುದು. ಭೂಮಿಯ 30 ವರ್ಷಗಳೆಂದರೆ ಶನಿ ಗ್ರಹದಲ್ಲಿ ಒಂದು ವರ್ಷವದು. ಒಂದು ರಾಶಿಯಲ್ಲಿ ಶನಿ ಗ್ರಹ 21/2 ವರ್ಷ ಇರುವುದು. 1981ರ ಅಮೇರಿಕೆಯ ಅಂತರಿಕ್ಷಯಾನ ವಾಯೋಜರ-1 ಶನಿಗ್ರಹದ ಕಕ್ಷೆಯ ಸಮೀಪದಿಂದ ಹಾಯ್ದು ಅನೇಕ ಸಾವಿರ ಚಿತ್ರಗಳನ್ನ ಭೂಮಿಗೆ ಕಳುಹಿಸಿರುವುದು.
ಈ ಚಿತ್ರಗಳಿಂದ ಶನಿಗ್ರಹದ ಬಗೆಗೆ ವಿಶೇಷ ಮಾಹಿತಿ ತಿಳಿದು ಬರುವುದು. ಗುರುಗ್ರಹಕ್ಕಿಂತ ತಂಪಾದ ವಾತಾವರಣ ಶನಿಗ್ರಹದಲ್ಲಿದೆ. ಉಳಿದ ಗ್ರಹಗಳಿಗಿಂತಲೂ ಇದು ಚಿಕ್ಕದಾಗಿದೆ. ಇಲ್ಲಿ ಜೀವರಕ್ಷಕ ಅನಿಲಗಳಿರಬಹುದಾಗಿದೆ. ವಾಯುಮಂಡಲವಿದ್ದು, ಜೀವಿಗಳಿರಬಹುದೆಂದು ಉಹಿಸಲಾಗಿದೆ.
ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಶನಿಗ್ರಹವು ಸೂರ್ಯನ ಹೆಂಡತಿ ಛಾಯಾಳ ಮಗನಾಗಿದೆ. ಸೂರ್ಯನು ನೀಲಿ ಬಣ್ಣದ ಮಗನನ್ನು ನಿರಾಕರಿಸಿದ ಕಾರಣ ಅವರಿಬ್ಬರಲ್ಲೂ ವೈರತ್ವ ಉತ್ಪನ್ನವಾಯಿತು. ಆದ್ದರಿಂದ ಸೂರ್ಯ ಮತ್ತು ಶನಿ ಪರಸ್ಪರ ಶತ್ರುಗಳೆನಿಸಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹದ ಪ್ರಭಾವವು ಬಹಳವಾಗಿರುವುದು ಶನಿಯು ನಿಧಾನ ಚಲನೆ ಹೊಂದಿದ್ದು, ಬುದ್ದಿವಂತ, ವಿಜಯಿ, ಕಠೋರ ಲಕ್ಷಣ ಹೊಂದಿದ್ದಾನೆ. ಅಹಂಕಾರಿ, ಆಕಸ್ಮಿಕ ಕಾರ್ಯ ಸಾಧಕವೆನಿಸಿದ್ದಾನೆ. ಸೇವಕ ಜನರು, ಶ್ರಮಿಕರು, ಕಾರ್ಯಕರ್ತರು, ದೀನರೂ ಇವರಿಗೆಲ್ಲ ಆಶ್ರಯದಾತವೆನಿಸಿದ್ದಾರೆ. ಪಾಶ್ಚತ್ಯ ಜ್ಯೋತಿಷಿಗಳು ಶನಿಗ್ರಹವು ಅಧರ್ಮ, ಸಾಮಾಜಿಕ ಪ್ರತಿಷ್ಠೆ, ಕೃಷಿಕರ್ಮ, ತಂತ್ರಶಾಸ್ತ್ರ, ವಿಜ್ಞಾನದ ಸಾಧನೆ, ಕಷ್ಟದಿಂದ ಕೂಡಿದ ಶರೀರದ ಸ್ಥಿತಿ, ಅಕ್ಷಯ ಸುಖ ಭೋಗಗಳ ಕಾರಕ ಎಂದಿದ್ದಾರೆ.
ಶನಿಯನ್ನು ಒಣಗಿದ ಕೂದಲುಳ್ಳ, ತೆಳ್ಳಗಿನ ಶರೀರದ, ಕಪ್ಪಾದ ಕುರುಪಾದ, ವೃದ್ಧನಾದ, ದಪ್ಪ ಹಲ್ಲಿನ, ಹೆದರಿದ ಕಣ್ಣುಗಳಿರುವ, ವಿಕೃತ ಉಗುರಿನ, ಕಫ ಮತ್ತು ವಾತಪ್ರಕೃತಿಯ, ಹರಿದ ವಸ್ತ್ರದ, ತಮೋಗುಣದ, ಆಲಸಿ, ಶೂದ್ರ ಜಾತಿಯ ಗ್ರಹವೆಂದಿದ್ದಾರೆ. ದುಃಖ ಮತ್ತು ಕಷ್ಟಗಳಿಗೆ ಶನಿ ಕಾರಣ ಎನ್ನಲಾಗಿದೆ. ಶನಿಯಲ್ಲಿ ವಿನಾಶ ಮತ್ತು ನಿರ್ಮಾಣ ಸ್ಥಿತಿಗಳಿವೆ. ಇದನ್ನ ನಾಲ್ಕು ಕಾಲಿನ ರೂಪವಿರುವ ನಪುಂಸಕ ಗ್ರಹವೆಂದಿದ್ದಾರೆ. ಪಶ್ಚಿಮ ದಿಕ್ಕಿನ ಸ್ವಾಮಿಯಾಗಿದ್ದು, ಶನಿಯ ಭಾಗ್ಯಂಕವು 8 ಆಗಿರುವುದು.
ಪಾಶ್ಚಾತ್ಯ ಜ್ಯೋತಿಷಿಗಳು ಶನಿಗೆ ಅಧರ್ಮ, ಅನಿಷ್ಟತೆ, ಅಸಭ್ಯತೆ, ಆಚಾರಹೀನತೆಗಳ ಶತ್ರು ಎಂದಿದ್ದಾರೆ. ಶನಿಯು ಸೀಸ, ಧಾತು, ಕಪ್ಪು ವಸ್ತ್ರ ಶೀತಕಾಲ, ಮರಭೂಮಿ, ಸ್ಮಶಾನ, ನಿರ್ಜಲ ಸ್ಥಾನ, ಹೊಲಸಾದ ಕೇರಿಗಳು, ಹಳ್ಳಿ ಮುಂತಾದವುಗಳನ್ನು ಪ್ರತಿನಿಧಿಸುತ್ತಾನೆ. ಎಮ್ಮೆ ಇವನ ಪ್ರತಿನಿಧಿ ಪಶುವಾಗಿರುವುದು. ಶನಿಗ್ರಹಕ್ಕೆ ಶುಕ್ರ ಮತ್ತು ಬುಧ ಗ್ರಹಗಳೊಂದಿಗೆ ಮಿತ್ರತ್ವ ಇದೆ. ಗುರು ಸಮವೆನಿಸಿದರೆ ಸೂರ್ಯ, ಕುಜ, ಚಂದ್ರು, ಶತ್ರುಗಳಾಗಿದ್ದಾರೆ.
ಶನಿಗೆ ಚಂದ್ರನೊಂದಿಗೆ ಭಾವನಾತ್ಮಕ ಶತ್ರುತ್ವವಿದೆ. ಮಂಗಳನೊಂದಿಗೆ ಕಾರ್ಯಕ್ಷಮತೆಯ ಭೇಧವಿದೆ. ಸೂರ್ಯನೊಂದಿಗೆ ಸೈದ್ಧಾಂತಿಕ ಮತಬೇಧವಿದೆ. ಶನಿಯಿಂದ ಕಷ್ಟ, ಮರಣ, ದುಃಖ, ವಿನಾಶಗಳನ್ನು ತಿಳಿಯುವರು. ಆಕಸ್ಮಿಕ ವಿಪತ್ತು, ಶಾಶ್ವತ ಸಂಪತ್ತು, ಶ್ರಮಕಾರರ ಕರ್ತವ್ಯ, ಕರ್ತವ್ಯ ಪಾರಾಯಣತೆ, ಸೇವಾ ಜೀವನ, ಬಂಡವಾಳ ತೊಡಗಿಸುವುದು, ನಿರಾಶೆ ಸಂವೇದನೆ, ಆಶ್ರಯ ಹೀನತೆಗಳನ್ನು ತಿಳಿಯುತ್ತಾರೆ.
ಶನಿ ಮಾಡುವ ಶುಭ ಪ್ರಭಾವಗಳೆಂದರೆ ದೀರ್ಘಾಯುಷ್ಯ, ಚಿಂತನಶಕ್ತಿ, ಐಶ್ವರ್ಯ, ಪ್ರಸಿದ್ಧಿ, ಸ್ಥಿರತೆಗಳೆನಿಸಿವೆ. ಅಶುಭ ಕಾರಕನಾದ ಶನಿಯು ದಾರಿದ್ರ್ಯ, ಚೋರ ಭಯ, ಗಾಯ, ಅಂಗಭಂಗವಾಗುವುದು, ವಾತಾ, ಪಾಶ್ವ ವಾಯು, ದಮ್ಮು, ಹೊಟ್ಟೆ ನೋವು, ದೃಷ್ಟಿ ದೋಷಗಳು ಮುಂತಾದವುಗಳಿಗೆ ಕಾರಣವೆನಿಸುವನು.
ತ್ಯಾಗ, ವನವಾಸ, ಸೇವಾಜೀವನ, ದೊಡ್ಡ ರೋಗಗಳು, ನೈಸರ್ಗಿಕ ವಿಕೋಪಕಗಳು, ಹುಚ್ಚುತನ, ಶನಿಯ ದೋಷದಿಂದ ಆಗುವವು. ಕಪ್ಪಾದ ಎಲ್ಲ ವಸ್ತುಗಳು, ಬಾರದ ವಸ್ತುಗಳು, ನೀಲಮಣಿ ಹಾವು, ಸಮುದ್ರ ಜೀವಿಗಳು, ಮೊಸಳೆ, ರೈಲ್ವೆ ,ವಿಮಾನಯಾನ, ಎಣ್ಣೆ, ನಾಣ್ಯಗಳು, ಇವುಗಳಿಗೆ ಶನಿಯು ಸ್ವಾಮಿಯೆನಿಸಿದ್ದಾನೆ. ಸರ್ಕಾರಿ ಕಾರ್ಮಿಕರು, ತಾಂತ್ರಿಕ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಚ್ಛತಾ ಕಾರ್ಮಿಕರುಗಳನ್ನ ಶನಿಯ ಪ್ರತಿನಿಧಿಸುತ್ತಾನೆ.
ಶನಿಯಿಂದ ಪಿತೃಕಾರ್ಯ, ವಂಶ ಪದ್ಧತಿ, ಸೆರೆಮನೆ ಬಂಧನ, ಜಮೀನ್ದಾರಿ, ಸಂಚಾರಿ, ಸಂಘಟನೆ, ಸಂಸ್ಥೆಗಳು ಮತ್ತು ಅಧಿಕಾರ ಚಲಾಯಿಸುವುದನ್ನು ತಿಳಿಯಬಹುದಾಗಿದೆ. ಶನಿ ಬಲಿಷ್ಠನಾದರೆ ಜನಪ್ರಿಯತೆ ಮತ್ತು ಸಾರ್ವಜನಿಕ ಪ್ರಸಿದ್ಧಿಯನ್ನು ಉಂಟುಮಾಡುವನು.
ಶನಿಗ್ರಹದಿಂದ ಗಂಭೀರತೆ, ಆಳ, ಗೂಢತೆ, ಪ್ರಾಚೀನತೆ, ಉದ್ವಿಗ್ನತೆ, ಬಂಧನ, ಅಪಹರಣ, ದೋಷಾರೋಪಣ, ಅನಾಚಾರ, ಜಿಪುಣತೆ, ಸಂಬಂಧ ಕೆಡುವುದು, ಒತ್ತಡ, ಅನಾಧಾರ, ಅಸ್ವಸ್ಯ, ಆಕ್ರೋಶ, ದರಿದ್ರ ತನ, ದುರ್ಘಟನೆ, ಮುರ್ಛೆ ಬರುವುದು, ಎಚ್ಚರ ತಪ್ಪುವುದು, ಶ್ರಮ ಮುಂತಾದವುಗಳನ್ನು ತಿಳಿಯಬಹುದಾಗಿದೆ.
ಶನಿಗ್ರಹದ ಪ್ರಭಾವ ಜೀವನದ ಆದಿಯಲ್ಲಿ ಅಥವಾ ಅಂತ್ಯಕಾಲದಲ್ಲಿ ಉಂಟಾಗುವುದು. ಪ್ರತಿಯೊಬ್ಬರಿಗೂ 7.5 ವರ್ಷಗಳವರೆಗೆ ತೊಂದರೆ ಕೊಡುತ್ತಾನೆ. ಇದನ್ನು ʼಸಾಡೇಸಾತಿʼ ಎನ್ನುತ್ತಾರೆ. ಪೂರ್ವ ಜನ್ಮದ ಕರ್ಮಗಳ ಫಲದಾಯಕ ಶನಿ ಎಂದು ನಂಬಲಾಗಿದೆ. ಪ್ರಜಾತಂತ್ರ, ಲೋಕ ಕಲ್ಯಾಣ, ಸಹಕಾರ, ಜನಶಕ್ತಿ, ವಿಜ್ಞಾನ ವಿಕಾಸ, ಪ್ರದೂಷಣ, ಬರಗಾಲ, ಬಿರುಗಾಳಿ, ಹಿಮಪಾತ ಮುಂತಾದವುಗಳಿಗೆ ಶನಿ ಸೂಚಕನಾಗಿದ್ದಾನೆ.
ವೈದಿಕ ಧರ್ಮದಂತೆ ಶನಿಯನ್ನು ಸಮಾಧಾನಪಡಿಸಲು ದಾನ, ಪುಣ್ಯಕಾರ್ಯ, ಮೃತ್ಯುಂಜಯ ಜಪ, ಧೀನರಿಗೆ, ಬಡವರಿಗೆ, ಹಸಿದವರಿಗೆ, ದಾನ, ಸೇವೆ ಮಾಡುವುದರಿಂದ ಜನಾರ್ಧನ ಸೇವೆ ಮಾಡಿದಂತಾಗುತ್ತದೆ.
ಸಂಯಮ, ಧೈರ್ಯ ನಿಯಮಪಾಲನೆ, ಕೆಲಸದಲ್ಲಿ ಆಸಕ್ತಿಗಳು ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ನೀಲಮಣಿ ಧರಿಸುವುದು ಹಿತಕಾರಿಯಾಗಿರುವುದು. ಲೋಹದ ಬಳೆ ಧರಿಸಬಹುದಾಗಿದೆ.
ಇದರ 1 ಅಂಕವು ಜೀವನದ ಪ್ರತೀಕವಾದರೆ, 8 ಮರಣದ ಪ್ರತೀಕ ವಾಗಿರುತ್ತದೆ. 9ನೇ ಅಂಕ ಶರೀರ ನಾಶದ ಪ್ರತಿಕವಾಗಿ ಸಮಸ್ತ ಜೀವಿಗಳ ಜೀವನ ಒಂದರಿಂದ 9ರ ವರೆಗೆ ವ್ಯಾಪಿಸಿರುವುದು.
ಅಂಕಗಳ ಮಹತ್ವವು ಅದ್ವಿತೀಯವಾಗಿದ್ದು, ಎಲ್ಲರನ್ನ ಇದರಿಂದ ಅಳೆಯಬಹುದಾಗಿದೆ. ಇವುಗಳಿಂದಲೇ ಹೆಚ್ಚು ಕಡಿಮೆ ಸಣ್ಣ ದೊಡ್ಡ ಎಂಬ ಭಾಗ ಮಾಡುವರು. ಅಂಕೆಗಳನ್ನು ಹೆಚ್ಚು ಕಡಿಮೆಗೊಳಿಸಿ ಗುಣಿಸಿ, ಭಾಗಿಸಿ, ಸೇರಿಸಿ, ಕಳೆದು ಮೂಲಾಂಕಕ್ಕೆ ತರಬಹುದಾಗಿದೆ. ಅವಧಿಯನ್ನು ಅಂಕಗಳಿಂದಲೇ ತಿಳಿಸುವರು.
ಅಂಕಗಳ ರಹಸ್ಯವು ಪ್ರಕೃತಿಯೊಂದಿಗೆ ಹುಟ್ಟಿ ಬಂದಿರುವುದರಿಂದ ಪ್ರಾಚೀನ ರಹಸ್ಯವೆನಿಸಿರುವುದು. ಶನಿಗ್ರಹವು ತಾನಿರುವ ರಾಶಿ ಅದರ ಹಿಂದಿನ ರಾಶಿ ಹಾಗೂ ಮುಂದಿನ ರಾಶಿಯನ್ನು ಹುಟ್ಟಿರುವವರಿಗೆ ಒಟ್ಟು 7.5ವರ್ಷ ಪೀಡಿಸುತ್ತಾನೆ ಎಂದು ನಂಬಲಾಗಿದೆ. ಶನಿಯಿಂದ ಒಳ್ಳೆಯ ಅಂಶಗಳು ಕಡಿಮೆ ಇವೆ. ದುಃಖಕಾರಕ ಕಷ್ಟಕಾರಕಗಳು ಹೆಚ್ಚಿವೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.