ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಮೂವರು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.
ಬಂಧಿತರನ್ನು ನವೀದ್ , ಉಮೇಶ್, ಪ್ರಸಾದ್ ದೇವಾಡಿಗ ಎಂದು ಗುರುತಿಸಲಾಗಿದೆ.
ಮೂಡಬಿದರೆ ತಾಲೂಕಿನ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿರುವ ಸ್ಪೋರ್ಟ್ಸ್ ಅಂಗಡಿಯ ಮುಂಭಾಗದಲ್ಲಿ ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೊಬೈಲ್ ವೆಬ್ ಸೈಟ್ ನಲ್ಲಿ ಕ್ರಿಕ್ರೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ಇದೇ ವೇಳೆ ನವೀದ್ ಎಂಬಾತನನ್ನು ಹಿಡಿದು ವಿಚಾರಿಸಿದಾಗ ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ ನಲ್ಲಿ ಬೆಟ್ಟಿಂಗ್ ಮಾಡಲು ಅವರಿಂದ ಹಣವನ್ನು ಗೂಗಲ್ ಪೇ ಅಥವಾ ಪೋನ್ ಪೇ ಮುಖೇನ ಪಡೆಯುವುದಾಗಿ ತಿಳಿಸಿದ್ದಾಗಿರುತ್ತದೆ.
Comfort Zone 247 ಎಂಬ ವೆಬ್ ಸೈಟ್ ನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿಸಿದ್ದಾನೆ. ಅದೇ ಪ್ರಕಾರ ಆರೋಪಿ ನವೀದ್ ನ ಬಳಿ ಇರುವ ಮೊಬೈಲ್ ನ ಗೂಗಲ್ ಕ್ರೋಮ್ ನಲ್ಲಿ Comfort Zone 247 ಎಂಬ ವೆಬ್ ಸೈಟ್ ನಲ್ಲಿ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಗೆ ತೊಡಗಿಸಿಕೊಂಡಿರುವ ಬಗ್ಗೆ ಕಂಡುಬಂದಿದೆ.
ಶ್ರೀಲಂಕ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ಗಾಗಿ ಹಣವನ್ನು ಬೆಟ್ಟಿಂಗ್ ಹಾಕುವ ಗಿರಾಕಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾನೆ. ಇವರನ್ನು ವಶಕ್ಕೆ ಪಡೆದು ಮೂಡಬಿದ್ರೆ ಪೊಲೀಸ್ ಠಾಣೆ ಅ.ಕ್ರ 157/2023 ಕಲಂ: 78(3)(4) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ. ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರು ಸಿಬ್ಬಂದಿಗಳಾದ ಚಂದ್ರಹಾಸ್ ರೈ, ಮೊಹಮ್ಮದ್ ಹುಸೇನ್, ಅಖೀಲ್ ಅಹ್ಮದ್ ಹಾಗೂ ಅವರ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
-***