ನಿಮಗೊಂದು ಹೊಸ ಡ್ರೆಸ್ ಕೊಂಡುಕೊಳ್ಳಬೇಕು ಎಂದು ಅನಿಸುತ್ತದೆ. ಆಗ ಏನು ಮಾಡುತ್ತೀರಿ ? ತಂದೆ ಅಥವಾ ತಾಯಿಯ ಬಳಿ ಹೋಗಿ ಡ್ರೆಸ್ ನ ಬೇಡಿಕೆ ಇಟ್ಟು ಅವರಿಂದಲೇ ತರಿಸಿಕೊಳ್ಳುತ್ತೀರಾ ? ಅಥವಾ ತಂದೆ-ತಾಯಿ ಬಳಿ ಅಂದಾಜು ಹಣವನ್ನು ತೆಗೆದುಕೊಂಡು ಪೇಟೆಗೆ ಹೋಗಿ ಬಟ್ಟೆ ಖರೀದಿಸಿ, ಹೊಲಿಗೆ ಕೊಟ್ಟು ನಂತರವೇ ನೀವೇ ಹೋಗಿ ಬಟ್ಟೆಯನ್ನು ತರುತ್ತೀರಾ? ಇವೆರಡರಲ್ಲಿ ಯಾವುದನ್ನೇ ಮಾಡಿದರು ನಿಮಗೆ ಹೊಸ ಡ್ರೆಸ್ ಸಿಗುತ್ತದೆ. ಆದರೆ ತಾಯಿ, ತಂದೆಯ ಡ್ರೆಸ್ ತಂದು ಕೊಟ್ಟರೆ ನಿಮಗೆ ಡ್ರೆಸ್ ಮಾತ್ರ ಸಿಗುತ್ತದೆ.
ಬದಲಿಗೆ ತಂದೆ ಅಥವಾ ತಾಯಿಯ ಕೈಯಿಂದ ಹಣ ಪಡೆದುಕೊಂಡು ನೀವೇ ಹೋಗಿ ಬಟ್ಟೆ ಖರೀದಿ ಮಾಡಿ ಹೋಲಿಸಿಕೊಂಡರೆ ಬಟ್ಟೆ ಅಂಗಡಿ ಎಲ್ಲಿದೆ ಎಂದು ಗೊತ್ತಾಗುತ್ತದೆ. ಯಾವೆಲ್ಲ ಬಟ್ಟೆಗಳಿವೆ ಎಂದು ಗೊತ್ತಾಗುತ್ತದೆ. ಬಟ್ಟೆಗಳಲ್ಲಿ ನಿಮಗೆ ಸೂಕ್ತವಾಗುವ ಬಟ್ಟೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಗೊತ್ತಾಗುತ್ತದೆ.
ಬಟ್ಟೆಯ ಅಳತೆ ಸ್ಪಷ್ಟವಾಗುತ್ತದೆ. ವ್ಯಾಪಾರವನ್ನು ಹೇಗೆ ಮಾಡಬೇಕೆಂಬ ಕೌಶಲವೂ ಗೊತ್ತಾಗುತ್ತದೆ. ಯಾವ ಟೈಲರ್ ಸರಿಯಾಗಿ ಬಟ್ಟೆ ಹೊಲಿಯುತ್ತಾನೆ ಎಂದು ಗೊತ್ತಾಗುತ್ತದೆ. ಹೇಳಿದ ದಿವಸ ಬಟ್ಟೆಯನ್ನು ಕೊಡದೆ ಸತಾಯಿಸುವ ಟೈಲರ್ ಗಳೊಂದಿಗೆ ಹೇಗೆ ವ್ಯವಹರಿಸಿ ನಮ್ಮ ಕೆಲಸ ಸಾಧಿಸಿಕೊಳ್ಳಬೇಕೆಂಬುದು ಗೊತ್ತಾಗುತ್ತದೆ. ತಾಯಿ ಅಥವಾ ತಂದೆಯೇ ಬಟ್ಟೆಯನ್ನು ತಂದುಕೊಟ್ಟರೆ ಯಾವ ಸಂಗತಿಗಳು ನಿಮಗೆ ಗೊತ್ತಾಗುವುದಿಲ್ಲ. ಆದರೆ ಶ್ರಮ ಸ್ವಲ್ಪ ಕಡಿಮೆ. ಕಲಿಯುವುದು ಮತ್ತು ಕಲಿಕೆಯನ್ನು ಗಳಿಸಿಕೊಳ್ಳುವುದರ ನಡುವಿನ ವ್ಯತ್ಯಾಸ ಇದೆ.
ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳು ಕಲಿಯುತ್ತಾರೆ.
ಕಲಿಕೆಯನ್ನು ಗಳಿಸಿಕೊಳ್ಳುವುದಿಲ್ಲ. ಅಧ್ಯಾಪಕರು ಬೋಧಿಸುತ್ತಾರೆ. ಕೆಲವೊಮ್ಮೆ ತಾಯಿ, ತಂದೆ ಅಥವಾ ಕುಟುಂಬದ ಹಿರಿಯರು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಓದಿಸುತ್ತಾರೆ. ಈ ವಿಚಾರಗಳನ್ನ ವಿದ್ಯಾರ್ಥಿಗಳು ಕಲಿಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಕಲಿಸುವವರಿಗೆ ; ಅಂದರೆ ಅಧ್ಯಾಪಕರಿಗೆ ಪ್ರಮುಖ ಪಾತ್ರವಿರುತ್ತದೆಯೇ ಹೊರತು ವಿದ್ಯಾರ್ಥಿಗಳಿಗಲ್ಲ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಕೇವಲ ಕುಲಿತುಕೊಳ್ಳುತ್ತಾರೆ. ಆದರೆ ಕಲಿಕೆಯ ಅನುಭವಗಳೆಲ್ಲವೂ ಸಿಗುವುದು ಅಧ್ಯಾಪಕರಿಗೆ ಹೊರತು ವಿದ್ಯಾರ್ಥಿಗಳಿಗಲ್ಲ.
ತಂದೆಯ ಡ್ರಸ್ ತಂದುಕೊಟ್ಟರೆ ಡ್ರೆಸ್ ಮಾಡಿಸುವ ಎಲ್ಲಾ ಅನುಭವಗಳು ತಂದೆಗೆ ಪ್ರಾಪ್ತವಾಗುವ ಹಾಗೆ ಇಲ್ಲಿಯೂ ಆಗುತ್ತದೆ. ಕಲಿಕೆಯನ್ನು ಗಳಿಸಿಕೊಳ್ಳುವುದೆಂದರೆ ನಿಮಗೆ ಗೊತ್ತಿರುವ ವಿಚಾರಗಳಿಗೆ ಗೊತ್ತಿಲ್ಲದ ವಿಚಾರಗಳನ್ನು ನೀವೇ ಹೊಂದಿಸಿಕೊಂಡು ಆಲೋಚಿಸಬೇಕು. ನೀವು ಯಾವ ರೀತಿ ಆಲೋಚಿಸಬೇಕೆಂದು ಅಧ್ಯಾಪಕರಿಗೆ ಹೇಗೆ ತಿಳಿದುಕೊಳ್ಳಬೇಕು. ಆಲೋಚಿಸಿದ ನಂತರವೇ ಅಭ್ಯಸಿಸಬೇಕು. ಆಗ ಕಲಿಕೆಯ ಗಳಿಕೆಯಾಗುತ್ತದೆ.