ಮಂಡ್ಯ: ಕೆಆರ್ ಎಸ್ ನಲ್ಲಿ ನೃತ್ಯಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯನೂ ಆಗಿರುವ ರೌಡಿ ಶೀಟರ್ ದೇವರಾಜು ಅಲಿಯಾಸ್ ಬುಲ್ಲಿ ಎಂಬಾತನಿಗೆ ಶಾಸಕ ರಮೇಶ್ ಅವರು ಅಧಿಕಾರಿಗಳ ಕೈಯಿಂದ ಸನ್ಮಾನಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.
ಸನ್ಮಾನ ಸ್ವೀಕರಿಸಿದ ನಂತರ ರೌಡಿಶೀಟರ್, ಶಾಸಕರ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ಶಾಸಕ ರಮೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ.
ಹಲವಾರು ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ದೇವರಾಜು, ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ವೇದಿಕೆಗೆ ಕರೆದು ಗೌರವ ಸಮರ್ಪಣೆ ಮಾಡಲಾಗಿದೆ. ಶಾಸಕರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದಿಂದ ಗೌರವ ಸಮರ್ಪಣೆ ಮಾಡಲಾಗಿದೆ.
ರೌಡಿ ಶೀಟರ್ ಗೆ ಸನ್ಮಾನಿಸಿದ ವೇದಿಕೆಯಲ್ಲಿ ಮಾತನಾಡುತ್ತಾ ತಮ್ಮನ್ನೇ ಉದಾಹರಣೆಯನ್ನಾಗಿಕೊಂಡು ಸಮರ್ಥನೆ ಮಾಡಿಕೊಂಡ ಶಾಸಕ ರಮೇಶ್ ಬಂಡಿಸಿದ್ದೇಗೌಡ, ತನ್ನ ಮೇಲೂ ಸಿಬಿಐ ಕೇಸ್ ಇದೆ. ಹಾಗಾದರೆ ನಾನೂ ಕಾರ್ಯಕ್ರಮಕ್ಕೆ ಹೋಗಬಾರದು. ಆಪಾದನೆ ಇದ್ದ ಮಾತ್ರಕ್ಕೆ ಅಪರಾಧಿ ಅಲ್ಲ ಎಂದು ಹೇಳಿ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜನಪ್ರತಿನಿಧಿಗಳು ಮೌಲ್ಯಗಳನ್ನು ಬೆಳೆಸಿಕೊಳ್ಳಿ
ಈ ಕುರಿತು ಮಾತನಾಡಿರುವ ಮಾಜಿ ಶಾಸಕ ರವೀಂದ್ರ ಶ್ರೀಕಂಠೇಗೌಡ, ಜನಪ್ರತಿನಿಧಿಗಳು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಹುಟ್ಟುತ್ತಲೇ ರೌಡಿಗಳಾಗಿರುವುದಿಲ್ಲ. ರಾಜಕೀಯಕ್ಕೆ ಬಳಸಿಕೊಳ್ಳುವ ಸಲುವಾಗಿ ಕೆಲವರನ್ನು ಫೋಕಸ್ ಮಾಡಿ ಅನ್ಯಾಯವಾಗಿ ಅವರ ಜೀವನ ಹಾಳು ಮಾಡುವ ಕೆಲಸ ನಮ್ಮ ಕ್ಷೇತ್ರದಲ್ಲಿ ಮೊದಲಿನಿಂದಲೂ ನಡೆದು ಬರುತ್ತಿದೆ. ರೌಡಿ ಶೀಟರ್ ಶಾಸಕರ ಜೊತೆ ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಪಾಲಹಳ್ಳಿ ಕೊಲೆ ಪ್ರಕರಣದಲ್ಲಿ ಈ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಅಧಿಕಾರಿಗಳ ಮುಂದೆನೇ ಸನ್ಮಾನ ಮಾಡಿದ್ದಾರೆ. ಇವರು ಜನರಿಗೆ ಯಾವ ಸಂದೇಶ ಕೊಡಲು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜನಕ್ಕೆ ಕೊಡಬೇಕಾದ ಸೈಟ್ ನ್ನು ತಾನು ಸ್ವಂತಕ್ಕೆ ಬಳಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಶಾಸಕರು
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಾಲಹಳ್ಳಿಯಲ್ಲಿ ಕೊಲೆಯಾದ ವಿನೋದ್ ಸಹೋದರ ಪ್ರಮೋದ್, ನನ್ನ ತಮ್ಮನ ಕೊಲೆಯಲ್ಲಿ ಭಾಗಿಯಾದವರಲ್ಲಿ ಓರ್ವನಾದ ಬುಲ್ಲಿ ದೇವರಾಜ್ ಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸನ್ಮಾನ ಮಾಡಿಸಿದ್ದಾರೆ. ಕೊಲೆ ಮಾಡಿ ರಮೇಶ್ ಬಂಡಿಸಿದ್ದೇಗೌಡ ಅವರ ಬಳಿ ಹೋದರೆ ಅವರೇ ಸೆಕ್ಯೂರಿಟಿ. ಅವರೊಂದಿಗೆ ಇದ್ದರೇ ಯಾವ ಪೊಲೀಸ್ ನವರು ಮುಟ್ಟುವ ಹಾಗಿಲ್ಲ ಎಂದು ಆರೋಪಿಸಿರುವ ಅವರು, ಶಾಸಕರು ಅಧಿಕಾರಿಗಳನ್ನು ಕಪಿ ಮುಷ್ಠಿಯಲ್ಲಿಟ್ಟುಕೊಂಡು, ಒದ್ದಾಡಿಸುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೊಲೆ ಆರೋಪಿಗೆ ಸನ್ಮಾನ ಮಾಡಿಸುತ್ತಿರುವ ಶಾಸಕರೇ, ನೀವು ಜಿಲ್ಲೆಯ ಯುವಕರಿಗೆ ಯಾವ ಸಂದೇಶ ನೀಡಲು ಹೊರಟ್ಟಿದ್ದೀರಾ ? ಕೊಲೆಗಳನ್ನು ಮಾಡಿಸಲು ಹೊರಟಿದ್ದೀರಾ ? ಎಲ್ಲರನ್ನೂ ಸಾಯಿಸಿಬಿಡಿ ಎಂದು ಕಿಡಿಕಾರಿದರು.
ನಮಗೆ ನ್ಯಾಯ ಕೊಡಿಸಿ. ಸಣ್ಣಪುಟ್ಟ ಹುಡುಗರನ್ನು ಸೇರಿಸಿದ್ದೀರಾ ? ಬುಲ್ಲಿ ದೇವರಾಜ್ ನನ್ನು 14 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಸೂಕ್ತ ರೀತಿಯಲ್ಲಿ ತನಿಖೆ ನಡೆಯದಿದ್ದರೆ ಸಿಒಡಿ ಹಾಗೂ ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸುವುದಾಗಿ ತಿಳಿಸಿದ ಅವರು, ನನಗೂ ಏನಾದರೂ ಆದರೆ ರಮೇಶ್ ಬಂಡಿಸಿದ್ದೇಗೌಡ ಅವರೇ ಕಾರಣ ಎಂದು ತಿಳಿಸಿದರು.