ಮನೆ ರಾಜ್ಯ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ರಾಜ್ಯದಲ್ಲಿ ಬರ ಇರುವುದು ನಿಜ. ಆದರೆ, ಅದರ ನಡುವೆಯೂ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್​ ಮುಖ್ಯ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ವಿದ್ಯುತ್​​ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಹೇಳಿಕೆ ಪ್ರಕಾರವೇ ಕೊರತೆ ಇರುವುದು 3 ಕೋಟಿ ಯುನಿಟ್ ಅಷ್ಟೇ. ಕೃತಕ ಅಭಾವ ಸೃಷ್ಟಿ ಮಾಡಿರುವುದು ಸರ್ಕಾರ. ವಿದ್ಯುತ್ ಉತ್ಪಾದನೆ ಬಗ್ಗೆ ಗಮನವನ್ನೇ ಕೊಡಲಿಲ್ಲ. ನನ್ನ ಕಾಲದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದೀವಾ? ದಾಖಲೆ ತೆಗೆಯಿರಿ ಎಂದು ಅವರು ಸವಾಲೆಸೆದರು.

ನವರಾತ್ರಿಯ ಸಮಯದಲ್ಲಿ ನಾನು ಹೇಳುತ್ತಿದ್ದೇನೆ, ನನ್ನ ಕಾಲದಲ್ಲಿ ಯಾವುದೇ ಕೆಲಸಕ್ಕೆ ನಾನು ಪರ್ಸಂಟೇಜ್ ಫಿಕ್ಸ್ ಮಾಡಿರಲಿಲ್ಲ, ಮುಂದೆಯೂ ಮಾಡುವವನಲ್ಲ. ನನಗೆ ಗೊತ್ತಿರುವ ಹಾಗೆ ಇಂಧನ ಸಚಿವ ಜಾರ್ಜ್ ​​ಗೆ ದುಡ್ಡಿಗೆ ಏನೂ ಕೊರತೆ ಇಲ್ಲ. ಜಾರ್ಜ್​​ ಗೆ ಹೈಕಮಾಂಡ್ ನವರು ಏನಾದರೂ ಫಿಕ್ಸ್ ಮಾಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಹಿಂದಿನ ಸರ್ಕಾರದ ಪಾಪದ ಫಲ ಎಂದು ಸದಾ ಟೀಕೆ ಮಾಡುತ್ತಾರೆ. ಹಿಂದಿನ ಸರ್ಕಾರದವರದ್ದು ಹಾಗಿರಲಿ, 135 ಸೀಟ್ ಗೆದ್ದು ಅಧಿಕಾರಕ್ಕೆ ಬಂದ ಇವರೇನು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯದಲ್ಲಿ ವಿದ್ಯುತ್ ​ನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಸಿದ ಅವರು, ಕಾಂಗ್ರೆಸ್ ​ನವರು ಕೇವಲ ಗ್ಯಾರಂಟಿ ಜಾರಿಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿ ಜಾರಿ ಮಾಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್​​ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದರ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದಕ್ಕೊದಿಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ. ಬರೀ ಇಷ್ಟರಲ್ಲೇ ಸಮಯ ಕಳೆಯುತ್ತಿದ್ದಾರೆಯೇ ವಿನಃ ವಿದ್ಯುತ್​​ ಉತ್ಪಾದನೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಾವರಿ ಪಂಪ್​ ಸೆಟ್ ​​ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಮುಖ್ಯಮಂತ್ರಿಗಳು ರೈತರ ಪಂಪ್ ​ಸೆಟ್​ ಗಳಿಗೆ ನಿರಂತರ 5 ಗಂಟೆ ವಿದ್ಯುತ್ ಕೊಡಲು ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಆದರೆ, 2 ಗಂಟೆ ಕೂಡ ವಿದ್ಯುತ್ ನೀಡಲಾಗುತ್ತಿಲ್ಲ. ಈ ಮಧ್ಯೆ, ವಿದ್ಯುತ್ ಅಭಾವ ಇದೆ ಎಂದೂ ಹೇಳುತ್ತಿದ್ದಾರೆ. ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ನಮ್ಮಲ್ಲಿರುವ ಥರ್ಮಲ್ ವಿದ್ಯುತ್ ಪ್ಲಾಂಟ್​ ಗಳಿಗೆ ಪ್ರತಿ ದಿನ ಬೇಕಿರುವ ಕಲ್ಲಿದ್ದಲು 62,000 ಟನ್. ಈ ಲೆಕ್ಕಾಚಾರದಲ್ಲಿ ಒಂದು ವರ್ಷಕ್ಕೆ ಬೇಕಾಗುವಷ್ಟು ಸ್ಟಾಕ್ ಇಟ್ಟುಕೊಂಡರೆ ಬೇರೆ ಖರೀದಿ ಮಾಡುವ ಅಗತ್ಯವೇ ಇರುವುದಿಲ್ಲ. ಆದರೆ, ಇಂಥ ವಿಚಾರಗಳ ಬಗ್ಗೆ ಇವರು (ಕಾಂಗ್ರೆಸ್ ಸರ್ಕಾರ) ಗಮನವೇ ಹರಿಸುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.