ಬೆಂಗಳೂರು (Bengaluru)-ಇಬ್ಬರು ಸಿನಿಮಾ ನಟರ ಮಾತು-ತಿರುಗೇಟಿನ ನಡುವೆ ಇದೀಗ ‘ಹಿಂದಿ ರಾಷ್ಟ್ರ ಭಾಷೆ’ (hindi is not a national language) ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ (Sudeep) ಅವರು “ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ” ಎಂದು ಹೇಳಿದ್ದರು. ಈ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅವರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಿಚ್ಚು ಹಚ್ಚಿದೆ. ಅದಾಗಲೇ ಸಿನಿಮಾ ಪ್ರಿಯರು, ಹಿಂದಿ ಪರ–ವಿರೋಧಿಗಳು ಚರ್ಚೆಗೆ ಇಳಿದಿದ್ದಾರೆ.
ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಅವರು, ʻನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ. ಜನ ಗಣ ಮನʼ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಕಿಚ್ಚ ಸುದೀಪ್ ಸರಣಿ ಟ್ವೀಟ್ ಮಾಡಿದ್ದಾರೆ. “ಹಲೋ ಅಜಯ್ ದೇವಗನ್ ಸರ್, ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ಆದರೆ, ಅದು ನಿಮಗೆ ಬೇರೆಯದ್ದೇ ರೀತಿಯಲ್ಲಿ ತಲುಪಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿದಾಗ ಆ ಹೇಳಿಕೆಯ ಬಗ್ಗೆ ವಿವರಿಸುವೆ. ನೋಯಿಸುವ ಉದ್ದೇಶದಿಂದಾಗಲಿ, ಪ್ರಚೋದಿಸಲು ಮತ್ತು ಚರ್ಚೆಯನ್ನು ಹುಟ್ಟು ಹಾಕಲು ನಾನು ಆ ಹೇಳಿಕೆಯನ್ನು ನೀಡಿಲ್ಲ. ನಾನು ಹಾಗೆ ಯಾಕೆ ಮಾಡಲಿ?
ನಾನು ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಸರ್. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ. ನಾನು ಆ ಸಾಲನ್ನು ಬೇರೆಯದ್ದೇ ರೀತಿಯಲ್ಲಿ ಹೇಳಿದ್ದೆ. ನಿಮ್ಮ ಮೇಲೆ ಯಾವಾಗಲೂ ನನ್ನಲ್ಲಿ ಪ್ರೀತಿ ಇರುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ನಿರೀಕ್ಷೆ ಇದೆ.
ಇನ್ನೊಂದು ಮಾತು ಅಜಯ್ ಸರ್… ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಯಾಕಂದ್ರೆ, ನಾವು ಪ್ರೀತಿಯಿಂದ ಹಾಗೂ ಗೌರವದಿಂದ ಹಿಂದಿ ಕಲಿತಿದ್ದೇವೆ. ಆದರೆ, ನಿಮ್ಮ ಟ್ವೀಟ್‌ಗೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್.. ಎಂದು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಸುದೀಪ್ ವಿವರಣೆಗೆ ಮತ್ತೆ ಪ್ರತಿಕ್ರಿಯಿಸಿರುವ ಅಜಯ್ ದೇವಗನ್, ಸುದೀಪ್, ನೀವು ನನ್ನ ಸ್ನೇಹಿತ. ಆದ ತಪ್ಪು ತಿಳಿವಳಿಕೆಯನ್ನು ಸ್ಪಷ್ಟಪಡಿಸಿರುವುದಕ್ಕೆ ಧನ್ಯವಾದ. ನಾನು ಚಿತ್ರರಂಗವನ್ನು ಒಂದಾಗಿ ನೋಡಿದ್ದೇನೆ. ನಾವು ಎಲ್ಲ ಭಾಷೆಯನ್ನು ಗೌರವಿಸುತ್ತೇವೆ ಹಾಗೂ ಇತರರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ಆಶಿಸುತ್ತೇವೆ. ನಿಮ್ಮ ಮಾತುಗಳು ನನಗೆ ಅನುವಾದ ಆದ ಸಂದರ್ಭದಲ್ಲಿ ತಪ್ಪಾಗಿರಬಹುದು’ ಎಂದು ಕೊನೆಗೆ ತಾವೇ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ಟ್ವೀಟ್‌ಗೂ ಪ್ರತಿಕ್ರಿಯಿಸಿರುವ ಸುದೀಪ್, ‘ಸಂಪೂರ್ಣ ವಿಷಯವನ್ನು ತಿಳಿಯದೇ, ಪ್ರತಿಕ್ರಿಯೆ ನೀಡದೆ ಇರುವುದೂ ಮುಖ್ಯವಾಗುತ್ತದೆ. ನಿಮ್ಮನ್ನು ದೂಷಿಸುವುದಿಲ್ಲ’ ಎಂದಿದ್ದಾರೆ.
ಇಬ್ಬರು ಸ್ಟಾರ್‌ಗಳ ನಡುವೆ ನಡೆದ ಈ ಟ್ವೀಟ್ ಸರಣಿಗೆ ಸಾವಿರಾರು ಜನರು ಟ್ವೀಟ್ ಮೂಲಕವೇ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ನಾವು ದಕ್ಷಿಣದಿಂದ ಬರ್ತೀವಿ ಅಂದ ಮಾತ್ರಕ್ಕೆ ಪ್ಯಾನ್ ಇಂಡಿಯಾ ಅಂತ ಕರೆಯೋಕೆ ಆರಂಭಿಸಿದರು. ಹಿಂದಿ ಭಾಷೆಯ ಚಿತ್ರಗಳನ್ನ ಪ್ಯಾನ್ ಇಂಡಿಯಾ ಅಂತ ಯಾಕೆ ಕರೆಯಲ್ಲ? ದಕ್ಷಿಣ ಭಾರತದ ಭಾಷೆಗಳಿಗೂ ಹಿಂದಿಯವರು ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಅವು ಓಡುತ್ತಿಲ್ಲ. ಆದರೆ, ಇಲ್ಲಿಂದ ಡಬ್ ಆದ ಚಿತ್ರಗಳು ಅಲ್ಲಿ ಓಡುತ್ತಿವೆ. ‘ಪುಷ್ಪ’, ‘ಕೆಜಿಎಫ್’.. ಇವರೆಲ್ಲಾ ಪ್ರಯತ್ನ ಪಟ್ಟರು. ಹೀಗಾಗಿ ಗೆದ್ದರು. ನನಗೆ ಅನಿಸುವ ಹಾಗೆ ‘ಆ’ ಪದವನ್ನು ಡಿಲೀಟ್ ಮಾಡಬೇಕು ಎಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು.