ದಾಂಪತ್ಯ ಜೀವನದ ಹೊಸ್ತಿಲಲ್ಲಿರುವ ನಿಮಗೆ ಸುತ್ತಲ ಪ್ರಪಂಚ ಸಪ್ತ ವರ್ಣಗಳ ಕಾಮನಬಿಲ್ಲು. ಪ್ರಕೃತಿ ಸೃಷ್ಟಿಸಿರುವ ಮೊಗ್ಗೆ ಹೂಗಳ ತರುಲತೆಗಳ ಸೊಬಗು, ಸಹ್ಯಾದ್ರಿ ಚೆಲುವು, ಭೂಮಿ ಆಕಾಶಗಳ ಸೌಂದರ್ಯ, ಸೂರ್ಯ ಚಂದ್ರರ ವೈಭವ ಇವೆಲ್ಲವೂ ನಿಮಗಾಗಿಯೇ ಜನ್ಮ ತಾಳಿವೆ ಎಂಬುದು ನಿಮ್ಮ ಕಲ್ಪನೆ. ಉತ್ಸಾಹ, ನಗೆಯ ಮೋಹಕ ಕಾರಂಜಿಗಳು ನೀವು. ನಿಮ್ಮ ಕಣ್ಣಿಗೆ ಬಡತನ, ಸಂಕಟ ಕಾಣವು. ದೃಷ್ಟಿಗೆ ಬೀಳುವಂಥವು ಸಂತೋಷ, ಸಂಭ್ರಮ, ಒಲವು ಮಾತ್ರ. ವಯಕ್ತಿಕವಾಗಿ ನಿಮ್ಮಿಬ್ಬರದು ಅಪೂರ್ವ ಬೆಸುಗೆ. ಇದುವರೆಗೂ ಅಪರಿಚಿತರಾಗಿದ್ದರು ಒಮ್ಮೆಲೆ ಹೊಸದೊಂದು ಆಯಸ್ಕಾಂತ ನಿಮ್ಮಿಬ್ಬರನ್ನು ಸೆಳೆದಿದೆ. ಅನುರಾಗ, ಪ್ರೀತಿ ನಿಮ್ಮ ಮನಸ್ಸನ್ನು ಒಂದುಗೂಡಿಸಿದೆ. ಗಂಡು-ಹೆಣ್ಣುಗಳಲ್ಲಿ ಮೂಡುವ ಇಂತಹ ತನ್ಮಯತೆ, ಆತ್ಮೀಯತೆ ಪ್ರೇಮದ ಅಂಕುರಕ್ಕೆ ನಾಂದಿ.
ದಂಪತಿಗಳಾಗಲಿರುವ ಜೋಡಿಯನ್ನು ನಾನೊಮ್ಮೆ ಕೇಳಿದೆ:
ನಿಮ್ಮಿಬ್ಬರಲ್ಲಿ ಇಂತ ಆಕರ್ಷಣೆ ಏಕೆ ಗೊತ್ತಾ?
ಗೊತ್ತು ನಾವಿಬ್ರೂ ಪರಸ್ಪರ ತುಂಬಾ ಪ್ರೀತಿಸುತ್ತೇವೆ ಅದಕ್ಕೆ.
ಪ್ರೀತಿ ಅಂದ್ರೆ ಏನು?
ಒಬ್ಬರನ್ನೊಬ್ಬರು ಇಷ್ಟಪಡೋದು.
ಪ್ರೀತಿ, ಪ್ರೇಮ ಎಂದರೆ ಇಷ್ಟು ಮಾತ್ರವೇ ಅಲ್ಲ ಎಂದು ಆ ಗೆಳೆಯರಿಗೆ ತಿಳಿಯದು. ಪ್ರೇಮದ ಅರ್ಥ, ವ್ಯಾಪ್ತಿ ಇನ್ನೂ ವಿಶಾಲವಾದದ್ದು. ಅದು ಇಬ್ಬರೂ ಜೀವಿಗಳಿಗೆ ಅಥವಾ ಅವರ ಸಂಸಾರಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಅಳಿವು ಉಳಿವುಗಳಿಗೂ ಅದರಲ್ಲಿ ಸ್ಥಾನ ಈ ವಿವರಗಳನ್ನೆಲ್ಲ ನೀವು ಅಭ್ಯಾಸಿದರೆ ಚೆನ್ನ.
ಪ್ರೇಮ ಎಂದರೆ ಸ್ನೇಹ, ಗೌರವ, ಸಮರ್ಪಣಾ ಮನೋಭಾವ. ಗಂಡು ಹೆಣ್ಣುಗಳ ಮಧ್ಯೆ ಈ ಭಾವ ಮೂಡಿದರೆ ಅವುಗಳ ಹಿಂದೆ ಲೈಂಗಿಕ ಬಯಕೆಯೂ ಇರುತ್ತದೆ. ಪ್ರೇಮದಿಂದ ಒಬ್ಬ ವ್ಯಕ್ತಿಗೆ ಸಂತೋಷ ಸಿಗುತ್ತದೆ ನಿಜ, ಆದರೆ ಇದೇ ವ್ಯಕ್ತಿ ತಾನು ಪ್ರೀತಿಸುವ ಇನ್ನೊಂದು ಜೀವಕ್ಕಾಗಿ ಯಾವ ತ್ಯಾಗವನ್ನು ಬೇಕಾದರೂ ಮಾಡಲು ಸಿದ್ಧನಾಗಿರಬೇಕು. ಬದುಕಿನ ಯಾವ ಕಷ್ಟದಿಂದಲೂ ಪ್ರೇಮಕ್ಕೆ ಹಾನಿ ತಟ್ಟದು. ಬದಲಿಗೆ ಇಂಥ ಪರೀಕ್ಷೆಗಳು ಪ್ರೇಮವನ್ನು ರಸಗಟ್ಟಿಯಾಗಿ ಮಾಡುತ್ತವೆ. ದೈಹಿಕ ಆಕರ್ಷಣೆ ಇರುವ ಯೌವ್ವನದಲ್ಲಿ ಮಾತ್ರವಲ್ಲ, ಸದಾಕಾಲವು ಜೀವನದುದ್ದಕ್ಕೂ, ಈ ಪ್ರೀತಿಯ ಸೆಲೆ ಬತ್ತದಂತೆ ನೀವು ನೋಡಿಕೊಳ್ಳಬೇಕು.
ಪ್ರೇಮ ವೈವಾಹಿಕ ಜೀವನದ ಭದ್ರತೆ ಅಡಿಗಲ್ಲು ಎಂಬುದನ್ನು ತಿಳಿದ ಬಳಿಕ, ವಿವಾಹದ ಅರ್ಥ ವ್ಯಾಪ್ತಿಗಳನ್ನು ನೀವು ಅರಿಯಬೇಕು. ಗಂಡು ಹೆಣ್ಣಿಗೆ ತಾಳಿ ಕಟ್ಟಿದ್ದು ಮಾತ್ರವಾಗಲಿ, ಪುರೋಹಿತರ ಮಂತ್ರ ಪಠಣ ಮಾತ್ರವಾಗಲಿ, ವಿವಾಹವಲ್ಲ. ಈ ಧಾರ್ಮಿಕ ವಿಧಿಗಳನ್ನು ಹಾಗೂ ಮಂತ್ರಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ವಿವಾಹದ ದಿನದಂದು ಸಮಾಜದ ಸಮ್ಮುಖದಲ್ಲಿ, ನ್ಯಾಯಬದ್ಧವಾಗಿ, ಗಂಡು ಹೆಣ್ಣು ಒಬ್ಬರನ್ನೊಬ್ಬರು ಕೈ ಹಿಡಿಯುತ್ತಾರೆ ಎಂಬುದನ್ನು ನೆನಪಿಡಬೇಕು.
ವಿವಾಹ ಎಂದರೇನು?.
ಪರಸ್ಪರ ಮೆಚ್ಚಿದ ಎರಡು ಜೀವಗಳು ಯಾವ ಅಡಚಣೆಯೂ ಇಲ್ಲದೆ, ಪ್ರೇಮ ಕಾಮಗಳನ್ನು ಒಟ್ಟಿಗೆ ಅನುಭವಿಸಲು ಮಾಡಿಕೊಂಡ ಬಂಧನ ವಿವಾಹ ಎನ್ನೋಣವೆ?
ಅಥವಾ ಲೈಂಗಿಕ ಸಂಬಂಧ ಮಾತ್ರವಲ್ಲದೆ, ಆರ್ಥಿಕ, ಮಾನಸಿಕ ಹಾಗೂ ಭೌದ್ಧಿಕವಾಗಿ ಪರಸ್ಪರರಿಗೆ ಹೊಣೆಯಾಗಿ ಬಾಳುವುದೇ ಮದುವೆಯ ಉದ್ದೇಶ ಎನ್ನಬಹುದೇ?
ಇಂತಹ ಗಂಡಿಗೆ ಇಂತಹ ಹೆಣ್ಣು ಎಂದು ಬ್ರಹ್ಮ ನಿಶ್ಚಯಿಸಿರುತ್ತಾನೆ. ಎಂದು ನಮ್ಮ ಹಿರಿಯರು ಹೇಳುವುದುಂಟು. ಈ ನಿಶ್ಚಯ ಸ್ವರ್ಗದಲ್ಲೇ ಆದರೂ, ವಿವಾಹಿತರಾದವರು ಬಾಳಿ ಬದುಕಬೇಕಾದದ್ದು ಸ್ವರ್ಗದಲಲ್ಲ, ಭೂಮಿಯ ಮೇಲೆ ತಾನೆ ಇದನ್ನು ನೀವು ಮರೆಯಬಾರದು.
ವೈವಾಹಿಕ ಜೀವನ ಹೂವಿನ ಸುಪ್ಪತ್ತಿಗೆಯಲ್ಲ, ಅದರ ಕ್ಷೇತ್ರ ಬಲು ವಿಸ್ತಾರ. ನೀವು ವಿವಾಹವಾದ ಸಾಧನೆ ಮಾಡಬೇಕಾದದ್ದು ಮುಂದೆ. ಅದು ನಿಮ್ಮಿಬ್ಬರ ಜೊತೆ ಕೂಡಿದ ಪಯಣ ದಾರಿಯಲ್ಲಿ ನಿಮಗೆ ಹೂದೋಟಗಳು ಸಿಗಬಹುದು, ಕಲ್ಲು ಮುಳ್ಳು, ಹಳ್ಳ ಕುಳ್ಳ, ನದಿ ನದಗಳು, ಪ್ರಪಾತಗಳು, ಬೆಟ್ಟಗಳು, ಕಡೆಗೆ ಹಸಿರಿನಿಂದ ಕೊಂಗೊಳಿಸುವ ಬಯಲು ಸಿಗಬಹುದು ಯಾವುದಾದರೂ ಸರಿ ಜೊತೆಯಲ್ಲಿರುವ ನೀವು ಪರಸ್ಪರ ಅವಲಂಬಿಗಳು ಆಮೆಯ ನಡಿಗೆಯ ಈ ಪಯಣದ ಬಳಿಕವೇ ನಿಮ್ಮ ವಿವಾಹದ ನಿಜವಾದ ಸಿದ್ಧಿ.
ಸಾರ್ಥಕ ವಿವಾಹದಲ್ಲಿ ಲೈಂಗಿಕ ಹೊಂದಾಣಿಕೆ ಮಾತ್ರವಲ್ಲದೆ ಬಹುಮುಖ್ಯವಾದ ಲೈಂಗಿಕ ಒಲವು, ಅಭಿರುಚಿ, ಭಾವನೆಗಳ ಹಿಂಡೂ, ಮಾತಾ ಪಿತೃಗಳ ಜವಾಬ್ದಾರಿಯು ಒಗ್ಗೂಡುತ್ತದೆ. ಹೀಗೆ ಬೇರೆ ವಿಷಯಗಳಲ್ಲೂ ವೈವಾಹಿಕ ಬಂಧನ ಬಿಗಿಯಾದಾಗ ಲೈಂಗಿಕ ಆಸಕ್ತಿಯ ಪ್ರಾಮುಖ್ಯ ಕಡಿಮೆಯಾಗಿ ಪರಸ್ಪರ ಸಮರ್ಪಣಾ ಭಾವದೊಂದೇ
ಸಾಧಾರಣವಾಗಿ ನಮ್ಮಲ್ಲಿ ಗಂಡು-ಹೆಣ್ಣು ಒಟ್ಟಿಗೆ ವಾಸಿಸಬೇಕಾದರೆ ವಿವಾಹವಾಗಲೇಬೇಕು ಎನ್ನುವ ನಿಯಮವಿದೆ ಹಾಗಾದರೆ ಎಲ್ಲರ ಬದುಕಿನಲ್ಲಿ ವಿವಾಹದ ಪಾತ್ರ ಹಾಗೂ ಉದ್ದೇಶಗಳೇನು?
ಕಲ್ಪನೆಯ ರಮ್ಯತೆಯಲ್ಲಿ ಮಾತ್ರ ವಿಹರಿಸುವ ಜೋಡಿ ಆಗಬಾರದು ನೀವು. ವಾಸ್ತವತೆಯ ಭದ್ರ ನೆಲೆಗಟ್ಟಿನಲ್ಲಿ ನಿಲ್ಲುವ ದಂಪತಿಗಳಾಗಬೇಕು.
ಹಿಂದೂ ಧರ್ಮ ಶಾಸ್ತ್ರದಲ್ಲಿ ವಿವಾಹದ ಸಾಧನೆಗಳಿಗೆ ಇರುವ ವ್ಯಾಪ್ತಿ ಅಪಾರ. ಮದುವೆಯಾದ ಸತಿಪತಿಗಳು ಬದುಕಿನುದ್ದಕ್ಕೂ ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆಗಾಗಿ ಜೊತೆಯಲ್ಲಿ ಬಾಳಬೇಕು. ಬೌದ್ಧಿಕ ಉನ್ನತಿಗಾಗಿ, ಧರ್ಮ ಶರೀರದ ಘೋಷಣೆಗಾಗಿ, ಅರ್ಥ ಮನಸ್ಸಿನ ಸಂತೃಪ್ತಿಗಾಗಿ, ಕಾಮ ಆತ್ಮೋನ್ನತಿಗಾಗಿ, ಮೋಕ್ಷ ಎಂಬುದು ಭಾರತೀಯರ ನಂಬಿಕೆ, ಧರ್ಮ, ಮೋಕ್ಷಗಳ ಪಾಠ ಪಾರಲೋಕಿಕ ಸುಖಕಾದರೆ, ಅರ್ಥ, ಕಾಮಗಳ ಅಧ್ಯಯನ ಐಹಿಕ ಸುಖಕ್ಕೋಸ್ಕರ, ಆದ್ದರಿಂದ ಸತಿಪತಿಗಳ ಸಾರ್ಥಕ ಬದುಕಿಗೆ ಇವೆರಡರ ಅಧ್ಯಯನವೂ ಅನಿವಾರ್ಯ.
ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ವಿವಾಹದಿಂದಾಗುವ ಉಪಯೋಗಗಳನ್ನು ವಿವೇಚಿಸೋಣ:
ವಿವಾಹದಿಂದ ಹೆಣ್ಣಿನ ಬದುಕಿಗೆ ಆಧಾರ ಅವಳ ಪ್ರೀತಿಗೆ ಇಂದು ಅವಳ ವೈಯಕ್ತಿಕ ಬೆಳವಣಿಗೆಗೆ ವಿವಾಹ ದೊಡ್ಡ ಆಸರೆ, ಗಂಡಿಗೂ ಸಹ ವಿವಾಹದಿಂದ ವಾಸಿಸಲು ಮನೆ, ಹೊತ್ತು ಹೊತ್ತಿಗೆ ಊಟ, ದೈಹಿಕ ಸುಖ ಸಿಗುವುದಲ್ಲದೆ, ಕಷ್ಟ ಸುಖಗಳಲ್ಲಿ ಸಮಪಾಲು ವಹಿಸುವ ಮಡದಿ ದೊರಕುತ್ತಾಳೆ. ಗಂಡು ಹೆಣ್ಣುಗಳ ಸಾಧನೆಗಳಿಗೆ ವೈವಾಹಿಕ ಜೀವನ ಬಲು ಪ್ರಮುಖ ಹಿನ್ನೆಲೆ ಆಗುತ್ತದೆ. ಜೀವನದಲ್ಲಿ ಎದುರು ಬರುವ ತೊಂದರೆಗಳನ್ನು ಸತಿಪತಿಗಳು ಒಟ್ಟಿಗೆ ಎದುರಿಸುವುದರಿಂದ ಅವರಲ್ಲಿ ಆತ್ಮೀಯತೆ, ಆತ್ಮ ವಿಶ್ವಾಸ ಮೂಡುತ್ತದೆ. ಅವರ ವೈಯಕ್ತಿಕವು ಆಗುತ್ತದೆ. ಆದ್ದರಿಂದಲೇ ವಿವಾಹಿತರಿಗೆ ಎಲ್ಲೆಡೆಯೂ ಗೌರವ.
ನೀವು ಏಕೆ ಮದುವೆಯಾಗ್ತೀರಿ?
ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ಆ ಪ್ರಶ್ನೆಯಿಂದ ನೀವು ತಬ್ಬಿವಾಗಬಹುದು.
ಎಲ್ಲರೂ ಮದುವೆಯಾಗುತ್ತಾರೆ ನಾವು ಆಗುತ್ತೀವಿ ಎನ್ನಬಹುದು. ನೀವು ಪ್ರಪಂಚದ ಬಹುತೇಕ ಜನ ಈ ಬಂಧನಕ್ಕೆ ತಾವಾಗಿಯೇ ಒಳಗಾಗುತ್ತಾರೆ. ಆದ್ದರಿಂದ ವಿವಾಹದಲ್ಲಿ ಏನೋ ಹಿರಿಮೆ ಇರಬೇಕಲ್ಲವೇ?
ವಿವಾಹದ ಉದ್ದೇಶಗಳನ್ನು ಸ್ಥೂಲವಾಗಿ ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳೋಣ.
ಮೊದಲನೆಯದು ನಿಮ್ಮಿಬ್ಬರಲ್ಲೂ ಮೂಡುವ ಪ್ರೇಮ, ಎರಡನೆಯದು ನಾಳಿನ ನಿಮ್ಮ ಲೈಂಗಿಕ ಜೀವನ, ವಂಶಾಭಿವೃದ್ದಿ, ಮೂರನೆಯದು ಕಡೆಯದು ನಿಮ್ಮಿಬ್ಬರ ಆಸಕ್ತಿ, ಅಭಿರುಚಿ ಇವುಗಳೆಲ್ಲವನ್ನು ಸಮಾನವಾಗಿ ಬೆಳೆಸಿಕೊಂಡರೆ ಮಾತ್ರ ನಿಮ್ಮ ವೈವಾಹಿಕ ಜೀವನ ಸುಭದ್ರವಾಗುತ್ತದೆ.