ಕನ್ನಡದ ‘ಡ್ಯಾಡ್’ ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ಸಿನಿಪ್ರಿಯರು ಮಾತ್ರವಲ್ಲದೇ ಬಾಲಿವುಡ್ ನ ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಅವರು ಕೂಡ ಈ ಟೀಸರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
‘ಡ್ಯಾಡ್’ ಸಿನಿಮಾದಲ್ಲಿ ಒಂದು ಖಡಕ್ ಆದಂತಹ ಕಥೆ ಇದೆ ಎಂಬುದಕ್ಕೆ ಟೀಸರ್ ನಲ್ಲಿ ಸುಳಿವು ಸಿಕ್ಕಿದೆ. ರಾಜ್ಯ, ಭಾಷೆಯ ಗಡಿಯನ್ನೂ ಮೀರಿ ಈ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ. ಹಿಂದಿಯ ‘ಖಳನಾಯಕ್’, ‘ತಾಲ್’, ‘ಸೌದಾಗರ್’, ‘ಸ್ವದೇಶ್’ ಮಂತಾದ ಸಿನಿಮಾಗಳ ನಿರ್ದೇಶಕ ಸುಭಾಷ್ ಭಾಯ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಡ್ಯಾಡ್’ ಟೀಸರ್ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಬಾಲಿವುಡ್ ಮಂದಿ ಕೂಡ ಈ ಚಿತ್ರದ ಬಗ್ಗೆ ಗಮನ ಹರಿಸುವಂತೆ ಮಾಡಿದ್ದಾರೆ.
‘ದೇವರಾಜ್ ಅಲಿಯಾಸ್ ಡೇವಿಡ್’ ಎಂಬುದು ‘ಡ್ಯಾಡ್’ ಶೀರ್ಷಿಕೆಯ ವಿಸ್ತೃತ ರೂಪ. ಸಿನಿಮಾದ ಕಥೆಗೆ ಈ ಡಿಫರೆಂಟ್ ಟೈಟಲ್ ಸೂಕ್ತವಾಗಿದೆ. ಅರ್ಜುನ್ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಎಲ್ಲರಿಗೂ ಎರಡು ಮುಖ ಇರುತ್ತದೆ. ಸಮಾಜದ ಎದುರು ಒಂದು ಮುಖ ಮಾತ್ರ ಕಾಣುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಆಗಾಗ ಕಷ್ಟಗಳು ಮುತ್ತಿಕೊಂಡರೆ, ದುಷ್ಟರು ಕಾಟ ನೀಡಿದರೆ, ನ್ಯಾಯ ಸಿಗದೇ ಇದ್ದಾಗ ಆತನ 2ನೇ ಮುಖ ಅನಾವರಣಗೊಳ್ಳುತ್ತದೆ. ಇಂಥ ಒಂದು ಎಳೆಯನ್ನು ಡ್ಯಾಡ್ ಸಿನಿಮಾ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಅರ್ಜುನ್ ಕೃಷ್ಣ ಅವರು ಎಂಬಿಎ ಪೂರ್ಣಗೊಳಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕುಂದಾಪುರದ ವಿಶಾಲ್ ರಾಘವ್ ಅವರು ‘ಡ್ಯಾಡ್’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನೃತ್ಯ ಬೋಪಣ್ಣ ಹಾಗೂ ಮಾಹಿಕಾ ಮಹಿ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್ ಮುಕ್ತಾಯ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಕೊನೇ ಹಂತದಲ್ಲಿವೆ.
ಈ ಚಿತ್ರದ ಮೂರು ಹಾಡುಗಳು ಬಿಡುಗಡೆ ಆಗಿವೆ. ನಟನಾ ಮುಂಜು ಅವರಿಗೂ ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರವಿದೆ. ಅನೇಕ ಹೊಸಬರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಅವರ ಜೊತೆ ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್, ಅರುಣಾ ಬಾಲರಾಜ್, ಸಿದ್ಲಿಂಗು ಶ್ರೀಧರ್ ಕೂಡ ನಟಿಸಿದ್ದಾರೆ.
‘ಡ್ಯಾಡ್’ ಸಿನಿಮಾ ಮೂಲಕ ಹೊಸ ಖಳನಟರು ಪರಿಚಯಗೊಳ್ಳಲಿದ್ದಾರೆ. ಶಿವಹರಿ ವರ್ಮಾ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಕಾರ್ಯವನ್ನು ಸುಭಾಷ್ ಘಾಯ್ ಶ್ಲಾಘಿಸಿದ್ದಾರೆ. ಮುಂಬೈ ಮೂಲದ ಆಕಾಶ್ ಸೇಠ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಿಲ್ ಕುಮಾರ್ ಕೆ. ಅವರು ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಲ್ಲದೇ ವಿಎಫ್ ಎಕ್ಸ್ ಹಾಗೂ ಪೋಸ್ಟರ್ ವಿನ್ಯಾಸದ ಕಾರ್ಯವನ್ನೂ ಮಾಡಿದ್ದಾರೆ.