ಬೆಂಗಳೂರು: ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಮುಖ್ಯಮಂತ್ರಿಗಳು ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆ ವಿವರ: ಟಾಟಾ ಸುಮೊ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 13 ಮಂದಿ ಮೃತಪಟ್ಟ ಘಟನೆ ನಗರದ ಹೊರವಲಯದ ಚಿತ್ರಾವತಿ ಬಳಿಯ ಸಂಚಾರ ಠಾಣೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ.26ರ ಗುರುವಾರ ಬೆಳಿಗ್ಗೆ 7ರ ಸುಮಾರಿನಲ್ಲಿ ಸಂಭವಿಸಿದೆ.
9 ಮಹಿಳೆಯರು ಹಾಗೂ ಗಂಡು ಮಗು ಸೇರಿ ನಾಲ್ಕು ಜನ ಪುರುಷರು ಮೃತಪಟ್ಟಿದ್ದಾರೆ. ಮೃತರನ್ನು ಆಂದ್ರದ ಅನಂತಪುರ ಜಿಲ್ಲೆಯ ಗೋರಂಟ್ಲ ವ್ಯಾಪ್ತಿಗೆ ಸೇರಿದ ಕೊತ್ತಚೆರುವು ಕಡೆಯವರು ಎಂಬ ಮಾಹಿತಿ ಲಭಿಸಿದೆ. ಇವರೆಲ್ಲರೂ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.
ಪಂಚರ್ ಆಗಿ ನಿಂತಿದ್ದ ಕಂಟೈನರ್ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ನಾಗೇಶ್ ತಿಳಿಸಿದರು.














