ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್’ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಕ್ರೀಡಾಕೂಟದ 4ನೇ ದಿನದಂದು ಭಾರತದ ಪ್ಯಾರಾ ಅಥ್ಲೀಟ್ ಗಳು 16ನೇ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇದರೊಂದಿಗೆ ಏಷ್ಯನ್ ಪ್ಯಾರಾ ಗೇಮ್ಸ್‌ನ 4 ನೇ ದಿನದಂದು ಮಹಿಳೆಯರ ಸಿಂಗಲ್ಸ್ SH6 ಬ್ಯಾಡ್ಮಿಂಟನ್ ಈವೆಂಟ್ ನಲ್ಲಿ ನಿತ್ಯಾ ಶ್ರೀ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 73 ನೇ ಪದಕವನ್ನು ತಂದುಕೊಟ್ಟರು. ಈ ಮೂಲಕ ಭಾರತ ಏಷ್ಯನ್ ಪ್ಯಾರಾ ಗೇಮ್ಸ್ ಇತಿಹಾಸದಲ್ಲಿ ಅತ್ಯಧಿಕ ಪದಕ ಗೆದ್ದ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.
ಭಾರತದ ಶೂಟರ್ ಸಿದ್ಧಾರ್ಥ ಬಾಬು ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಿದ್ಧಾರ್ಥ ಅವರು R6 ಮಿಶ್ರಿತ 50m ರೈಫಲ್ಸ್ ಪ್ರೋನ್ SH-1 ಈವೆಂಟ್ ನಲ್ಲಿ ಚಿನ್ನದ ಪದಕ ಗೆದ್ದು, ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ದಾಖಲೆ ನಿರ್ಮಿಸಿದರು. ಇದರೊಂದಿಗೆ 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲ್ಲಿರುವ ಪ್ಯಾರಾಲಿಂಪಿಕ್ಸ್ ಗೂ ಅವಕಾಶ ಗಿಟ್ಟಿಸಿಕೊಂಡರು.
ಬೆಳ್ಳಿ ಗೆದ್ದ ಭಾಗ್ಯಶ್ರೀ
ಮಹಿಳೆಯರ ಶಾಟ್ ಪುಟ್-ಎಫ್ 34 ಈವೆಂಟ್ ನಲ್ಲಿ, ಭಾಗ್ಯಶ್ರೀ ಮಾಧವರಾವ್ ಜಾದವ್ ಅವರು 7.54 ಮೀಟರ್ ದೂರ ಎಸೆದು ಬೆಳ್ಳಿ ಪದಕವನ್ನು ಪಡೆದರೆ, ಆರ್ಚರಿ ಪುರುಷರ ಡಬಲ್ಸ್ – W1 ಓಪನ್ ಈವೆಂಟ್ ನಲ್ಲಿ, ಆರ್ಚರ್ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ 125 ಹಾಗೂ120 ಅಂಕಗಳೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡರು. ಹಾಗೆಯೇ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ SL-4 ಈವೆಂಟ್‌ನಲ್ಲಿ ಸುಕಾಂತ್ ಕದಮ್ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಸಚಿನ್ ಖಿಲಾರಿಗೆ ಚಿನ್ನ
ಕ್ರೀಡಾಕೂಟದ 4 ನೇ ದಿನದಂದು ಭಾರತವು ಅಥ್ಲೆಟಿಕ್ಸ್ ವಿಭಾಗದಲ್ಲಿ ಮಿಂಚಿನ ಪ್ರದರ್ಶನ ನೀಡಿತು. ಪುರುಷರ ಶಾಟ್ ಪುಟ್-ಎಫ್ 46 ಈವೆಂಟ್‌ನಲ್ಲಿ ಸಚಿನ್ ಖಿಲಾರಿ 16.03 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರೆ, ರೋಹಿತ್ ಹೂಡಾ 14.56 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದರು. ಹಾಗೆಯೇ ಪುರುಷರ 100 ಮೀಟರ್ ಟಿ-37 ಸ್ಪರ್ಧೆಯಲ್ಲಿ ಶ್ರೇಯಾಂಶ್ ತ್ರಿವೇದಿ 12.24 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪ್ಯಾರಾ ಅಥ್ಲೀಟ್ ನಾರಾಯಣ್ ಠಾಕೂರ್ ಪುರುಷರ 100 ಮೀಟರ್ ಟಿ-35 ಸ್ಪರ್ಧೆಯಲ್ಲಿ 14.37 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದು, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡನೇ ಪದಕವನ್ನು ತಮ್ಮದಾಗಿಸಿಕೊಂಡರು.
ಎಂದಿನಂತೆ ಪದಕ ಪಟ್ಟಿಯಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಆತಿಥೇಯ ರಾಷ್ಟ್ರವು 336 ಪದಕಗಳೊಂದಿಗೆ (133 ಚಿನ್ನ, 110 ಬೆಳ್ಳಿ, 93 ಕಂಚು) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ನಂತರ ಕ್ರಮವಾಗಿ ಇರಾನ್ (28, 34, 26), ಜಪಾನ್ (23, 25, 31), ಥೈಲ್ಯಾಂಡ್ (20, 14, 32) ಉಜ್ಬೇಕಿಸ್ತಾನ(19, 18, 22), ಭಾರತ (18, 21, 34) ನಂತರದ ಸ್ಥಾನ ಪಡೆದಿವೆ.
ಪ್ರಧಾನಿ ಮೋದಿ ಅಭಿನಂದನೆ
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತ 73ನೇ ಪದಕವನ್ನು ತನ್ನದಾಗಿಸಿಕೊಂಡಿದೆ. ಇನ್ನು ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಇತಿಹಾಸ ನಿರ್ಮಿಸಿರುವ ಭಾರತದ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ಮೋದಿ ಹಾಡಿಹೊಗಳಿದ್ದಾರೆ.