ಮುಂಬೈ (Mumbai)- ಚೈನಾಮನ್ ಬೌಲರ್ ಕುಲದೀಪ್ ಯಾದವ್ (Kuldeep Yadav) ಮಾರಕ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals ) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders ) ವಿರುದ್ಧ 4 ವಿಕೆಟ್ ಗಳ ಜಯ ಸಾಧಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಕುಲದೀಪ್ ಸ್ಪಿನ್ ಮೋಡಿಗೆ ಸಿಲುಕಿ ನಿತೀಶ್ ರಾಣಾ ಅರ್ಧಶತಕದ (57) ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳ ಸಾಧಾರಣ ಮೊತ್ತ ಸೇರಿಸಿತು. 147 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.
ಇದರೊಂದಿಗೆ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕು ಗೆಲುವು ದಾಖಲಿಸಿರುವ ಡೆಲ್ಲಿ 8 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಕೆಕೆಆರ್ 9 ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದೆ.
ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಪೃಥ್ವಿ ಶಾ ಅವರನ್ನು ಉಮೇಶ್ ಯಾದವ್ ಹೊರದಬ್ಬಿದರು. ಇದರಿಂದ ಡೆಲ್ಲಿ ಆರಂಭದಲ್ಲೇ ಆಘಾತ ಎದುರಿಸಿತು. ಮಿಚೆಲ್ ಮಾರ್ಷ್ (13), ಲಲಿತ್ ಯಾದವ್ (22), ಡೇವಿಡ್ ವಾರ್ನರ್ (42), ನಾಯಕ ರಿಷಭ್ ಪಂತ್ (2) ರನ್ ಗಳಿಸಿದರು. ಲಲಿತ್ ಯಾದವ್ ಹಾಗೂ ಡೇವಿಡ್ ವಾರ್ನರ್ ಮೂರನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ದಾಳಿಗಿಳಿದ ಉಮೇಶ್, ಮಗದೊಮ್ಮೆ ಡೆಲ್ಲಿ ತಂಡವನ್ನು ಕಾಡಿದರು. ಅಪಾಯಕಾರಿ ವಾರ್ನರ್ ಜೊತೆಗೆ ನಾಯಕ ರಿಷಭ್ ಪಂತ್ ರನ್ನು ಪೆವಿಲಿಯನ್‌ಗೆ ಹಿಂತಿರುಗಿಸಿದರು.
ಪರಿಣಾಮ ಡೆಲ್ಲಿ, 11.1 ಓವರ್‌ಗಳಲ್ಲಿ 84ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಹಂತದಲ್ಲಿ ರೋವ್‌ಮ್ಯಾನ್ ಪೊವೆಲ್ (ಅಜೇಯ 33) ಹಾಗೂ ಅಕ್ಷರ್ ಪಟೇಲ್ (24) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಕೆಆರ್ ಪರ 24 ರನ್ ತೆತ್ತು ಮೂರು ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಮಿಂಚಿನ ದಾಳಿ ಮಾಡಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ 35 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು. ನಾಯಕ ಶ್ರೇಯಸ್ ಐಯ್ಯರ್ 42 ರನ್ ಹಾಗೂ ನಿತೀಶ್ ರಾಣಾರ 57 ರನ್ ಕೊಡುಗೆ ನೀಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಪ್ರಮುಖಪಾತ್ರ ವಹಿಸಿದರು. ಡೆಲ್ಲಿ ಪರ ಕುಲದೀಪ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಏಪ್ರಿಲ್ 10ರಂದು ಕೆಕೆಆರ್ ವಿರುದ್ಧವೇ ನಾಲ್ಕು ವಿಕೆಟ್ ಕಬಳಿಸಿದ್ದ ಕುಲದೀಪ್, ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.