ಮನೆ ದೇವರ ನಾಮ ತೆಗೆಯೋ ನಿನ್ನ ಬಾಗಿಲವಾ

ತೆಗೆಯೋ ನಿನ್ನ ಬಾಗಿಲವಾ

0

ತೆಗೆಯೋ ನಿನ್ನ ಬಾಗಿಲವಾ |

ಗುರು ರಾಘವೇಂದ್ರ ಮುನಿಪುಂಗವಾ || (ಪ)

ನಿನ್ನಂಗಳದಿ ಬಂದು ಸೇವೆ ಸಲ್ಲಿಸುತ ಜನರು |

ನೀನೀಡುವ ಅನ್ನ ಹುಳಿ ಉಂಡು ಸಂತಸದಿಂದ |

ಮಂತ್ರಾಲಯದಲ್ಲಿ ವಾಸಿಸುತ್ತಿದ್ದರು ಅಂದು |

ಮತ್ತೆ ಮರಳಿ ಆ ದಿನಗಳಂತೆ ಮಾಡು ಇಂದು || (1)

ಇನ್ನೂಟದ ರುಚಿಯ ಮುಂದೆ ಇನ್ನಾವದು ಬೇಡ |

ನೀನು ಕರುಣಿಸೋ ಬೇಗ ತಡಮಾಡದಲೆ |

ಘಮ್ಮೆನ್ನುವ ಪರಿಮಳದ ಪ್ರಸಾದ ಕೊಡು ಬೇಗ |

ಕಾಯಲಾರೆ ನಾನು ಈ ಲೋಕದಿ ನೀನಿರುವಾಗ || (2)

ನಿನ್ನ ದ್ವಾರವ ಮುಚ್ಚಿ ಕುಳಿತರೇನು ಚೆಂದ |

ಭಯ ಪಡುತ್ತಿರುವ ಭಕ್ತರ ಭವ ದೂರ ನಿನ್ನಿಂದ |

ಅರಿತಿದ್ದರು ಇಂದೇಕೋ ನೀನು ಹೀಗೆ ದೂರ |

ಮಂದ ಮತಿಗಳೆಂದು ಕ್ಷಮಿಸು ಮಾಡು ಉದ್ಧಾರ || (3)

ಗುರು ನೀನಾಗಿರುವೆ ತಂದೆ ತಾಯಿ ಎಲ್ಲ |

ನಂಬಿದವರ ಪಾಲಿನ ಕಾಮಧೇನು ಕಲ್ಪತರು |

ಮತ್ತೆ ಮತ್ತೆ ಕೂಗಿ ಕರೆಯುತಿರುವನು ನಿನ್ನ ಭಕ್ತರು |

ಶಿರ ಬಾಗಿ ಬೇಡುವೆ ಮಹಾಮಹಿಮ ನೀನೆ ಗುರು || (4)

ಅಂಜದಿರಿ ಅಳುಕದಿರಿ ಎನ್ನುತ್ತ ದರುಶನವ ನೀಡು |

ದುರಿತ ದುಃಖ ಗಳ ಪರಿಹರಿಸಿ ಕಾಪಾಡು |

ಮತ್ತೊಮ್ಮೆ ಬೇಡುವೆ ಗುರು ರಾಘವೇಂದ್ರ |

ಶರಣಜನ ಸುಪ್ರೀತ ಜಾಹ್ನವಿ ವಿಠ್ಠಲನ ಯೋಗೀoದ್ರ || (5)