ವಿಜಯಪುರ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವರಾದ ಜಮೀರ್ ಅಹ್ಮದ್, ಎಂಬಿ ಪಾಟೀಲ್ ಮತ್ತು ಕೆ ಎನ್ ರಾಜಣ್ಣ, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಒಳಗಡೆಯೇ ಕುತಂತ್ರ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಎಲ್ಲಿಲ್ಲಿ ಓಡಾಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇದೆ. ಡಿ.ಕೆ.ಶಿವಕುಮಾರ್ ಪರ 70 ಶಾಸಕರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಪರ 65 ಶಾಸಕರು ಇದ್ದಾರೆ ಅಂತ ಕಾಂಗ್ರೆಸ್ ನವರೇ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದರು.
ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ ಈಗ ದಿವಾಳಿ ಆಗಿದೆ. ಯೋಜನೆಗಳನ್ನ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಯೋಜನೆಗೆ ಹಣ ಕೊಡಲಾಗದೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.
ಆಪರೇಷನ್ ಕಮಲ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಲಾಗುತ್ತಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಆಫರ್ ನೀಡಿದ ಬಗ್ಗೆ ವಿಡಿಯೋ, ಆಡಿಯೋ ಇದ್ದರೇ ಬಹಿರಂಗಪಡಸಲಿ. ಏನೇ ಆರೋಪ ಇದ್ದರೂ ಅದನ್ನು ಬಹಿರಂಗಪಡಿಸಬೇಕು. ಕಾಂಗ್ರೆಸ್ ನವರು ತಾವೇ ಜಗಳಾಡಿ ಹಾಳಾಗುವಾಗ ನಮ್ಮದೇನು ಕೆಲಸ ಎಂದು ಯತ್ನಾಳ್ ತಿರುಗೇಟು ನೀಡಿದರು.