ಮನೆ ರಾಜ್ಯ 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ: ಗೃಹ ಸಚಿವ ಡಾ. ಜಿ ಪರಮೇಶ್ವರ್

17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ: ಗೃಹ ಸಚಿವ ಡಾ. ಜಿ ಪರಮೇಶ್ವರ್

0

ತುಮಕೂರು:  17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ 200 ಹೆಚ್ಚು ತಾಲೂಕುಗಳನ್ನ ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 10 ತಾಲೂಕಿನಲ್ಲಿ  1 ತಾಲ್ಲೂಕನ್ನು ಮಾತ್ರ ಪರಿಗಣಿಸಿರಲಿಲ್ಲ. ಈಗ 10 ತಾಲ್ಲೂಕುಗಳನ್ನ ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ ಎಂದರು.

ನಮಗೆ ಹಣಕಾಸಿನ ಕೊರತೆಯಂತು ಸದ್ಯಕ್ಕೆ ಇಲ್ಲ. ಈಗಾಗಲೇ 19 ಕೋಟಿ ಹಣವನ್ನ ಜಿಲ್ಲಾಧಿಕಾರಿ ಅಕೌಂಟ್ ಗೆ ಹಾಕಲಾಗಿದೆ.  ಆ ಹಣವನ್ನ ಯಾವುದಕ್ಕೆ ಬಳಸಬೇಕು ಎಂಬ ಸೂಚನೆಯನ್ನ ಕೊಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು. ಗುಳೆ ಹೋಗುವಂತಹವರಿಗೆ ಕೆಲಸ ಒದಗಿಸುವ ಕಾರ್ಯಕ್ಕೆ ಹಣ ಮೀಸಲಿಡಲಾಗಿದೆ. ಸುಮಾರು 550 ಕೋಟಿ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ನೆರವು ಬಂದಿಲ್ಲ. ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಹಸಿರು ಚೆನ್ನಾಗಿದೆ ಅಂತ ಅವರು ವರದಿ ಬರೆದುಕೊಂಡು ಹೋಗಿದ್ದಾರೆ. ಅವರ ಕಣ್ಣಿಗೆ ಬರ ಕಾಣಿಸಿಲ್ಲ, ನಮ್ಮ ಕಣ್ಣಿಗೆ ಬರ ಕಾಣಿಸ್ತಿದೆ. ಸುಮಾರು 36 ಸಾವಿರ ಕೋಟಿ ನಷ್ಟ ಆಗಿದೆ. ರಾಜ್ಯದ ಎಲ್ಲಾ ತಾಲೂಕಿನಲ್ಲಿ ಬರದ ಛಾಯೆ ಕಾಣಿಸುತ್ತಿದೆ.

ಸುಮಾರು 65% ಮಳೆ ಈ ಬಾರಿ ಆಗಿಲ್ಲ.  ಕಳೆದ ಎರಡು ವರ್ಷದಿಂದ ಮಳೆ ಚೆನ್ನಾಗಿ ಆಗಿರೋದ್ರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.  ಬೆಳೆಗೆ ಸಮಸ್ಯೆ ಎದುರಾಗಿದೆ. ಬರ ಪರಿಹಾರದ ನೀರಿಕ್ಷೆಯಲ್ಲಿದ್ದೇವೆ, ಅವರು ಎಷ್ಟು ಕೊಡ್ತಾರೆ ಗೊತ್ತಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಕೆಎಸ್ಆರ್ ಟಿಸಿ ಬಸ್ ಗೆ ಬೆಂಕಿ ಹಚ್ಚಿದ ವಿಚಾರವಾಗಿ ಮಾತನಾಡಿ,  ಮರಾಠ ಮೀಸಲಾತಿ ಬಗ್ಗೆ ಮಹಾರಾಷ್ಟ್ರದಲ್ಲಿ ಹೋರಾಟ ನಡೀತಿದೆ.  ಆ ಸಂದರ್ಭದಲ್ಲಿ ಯಾವುದೇ ರಾಜ್ಯದ ವಾಹನಗಳು ಕಂಡಲ್ಲಿ ಅವುಗಳ ಮೇಲೆ ಕಲ್ಲು ತೂರಿದ್ದಾರೆ. ಕೆಲವು ಬಸ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅದೇ ರೀತಿ ನಮ್ಮ ಕೆಎಸ್ಆರ್ ಟಿಸಿ ಬಸ್ ಗೂ ಬೆಂಕಿ ಹಚ್ಚಿದ್ದಾರೆ.  ನಾವು ಇದನ್ನ ಗಮಿನಿಸಿದ್ದೇವೆ.  ಗಡಿ ಪ್ರದೇಶದಲ್ಲಿ ಎಲ್ಲಾ ರೀತಿಯ ಕಟ್ಟೇಚ್ಚೆರವನ್ನ ಮಾಡಿದ್ದೇವೆ ಎಂದು ತಿಳಿಸಿದರು.

ಮೊನ್ನೆ ಕೇರಳದಲ್ಲಿ ಬಾಂಬ್ ಬ್ಲಾಸ್ ಆಯ್ತು.  ಆಗ ನಾನು ಮಂಗಳೂರಿನಲ್ಲಿದ್ದೆ.  ತಕ್ಷಣ ಕೇರಳ ಬಾರ್ಡರ್ ನಲ್ಲಿ ಭದ್ರತೆಯನ್ನ ಅಲರ್ಟ್ ಮಾಡಿದ್ದೇವೆ. ಇವತ್ತು ಇಡೀ ಬೆಳಗಾವಿ, ಬೀದರ್, ಗುಲಬರ್ಗಾದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಿದ್ದೇನೆ.  ನಾವು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವಾಗ ಮಹಾರಾಷ್ಟ್ರದವರು ಕರಾಳ ದಿನವನ್ನ ಆಚರಣೆ ಮಾಡ್ತಾರೆ.  ಆ ಸಂದರ್ಭದಲ್ಲಿ ಮರಾಠಿ ಮುಖಂಡರು ನಮ್ಮ ಕರ್ನಾಟಕದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡ್ತಾರೆ. ಅದು ಒಂದು ವೇಳೆ ಗಡಿಯನ್ನ ದಾಟಿ ಬಂದು ರಾಜ್ಯದಲ್ಲಿ ಆ ರೀತಿಯ ಭಾಷಣ ಮಾಡಿದ್ರೆ ತಕ್ಷಣ ಅವರನ್ನ ಅರೆಸ್ಟ್ ಮಾಡ್ತಿವಿ. ಅವರು ಯಾರೆ ಆಗಿರಲಿ, ಎಷ್ಟು ದೊಡ್ಡವರೇ ಆಗಿರಲಿ ಮಂತ್ರಿ ಆಗಿದ್ರು ಅರೆಸ್ಟ್ ಮಾಡ್ತಿವಿ. ಈ ಬಗ್ಗೆ ನಾನು ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

ತಾಕತ್ತಿನ ಸವಾಲ್ ಹಾಕಿರುವ ರಮೇಶ್ ಜಾರಕಿಹೋಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಕ್ಷಿ ಕೊಡಲಿ ಮೊದಲು.  ಸಾಕ್ಷಿ ಕೊಟ್ಟ ಮೇಲೆ ಅದರ ಬಗ್ಗೆ ಯೋಚನೆ. ಇನ್ನು ಕೊಟ್ಟಿಲ್ಲ, ಕೊಟ್ಟ ಮೇಲೆ ನಾವು ನ್ಯಾಯನೇ ಕೊಡಿಸೋದು, ಅನ್ಯಾಯ ಕೊಡೋದಿಲ್ಲ ಎಂದರು.

ನಮ್ಮ ಸರ್ಕಾರ ಸುಭದ್ರವಾಗಿದೆ

ಆಪರೇಷನ್ ಕಮಲದ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಸುಭದ್ರವಾಗಿದೆ. 135 ಶಾಸಕರನ್ನ ಆರಿಸಿ ಕಳುಹಿಸಿದ್ದಾರೆ.  ನಾವು ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ಕೊಡ್ತಿದ್ದೇವೆ‌. ಪ್ರತಿಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ. ನಾನು ಅವರಲ್ಲಿ ಮನವಿ ಮಾಡೋದು ಏನು ಅಂದ್ರೆ ಧನಾತ್ಮಕ ಟೀಕೆಗಳನ್ನ ಮಾಡಿ.  ಸಲಹೆ ಸೂಚನೆಗಳನ್ನ ಕೊಡಿ, ನಾವು ಅದನ್ನ ಸ್ವೀಕಾರ ಮಾಡ್ತಿವಿ. ಅದನ್ನ ಬಿಟ್ಟು ಸರ್ಕಾರ ಕೆಡುತ್ತಿವಿ, 20 ಜನ ಅಲ್ಲಿ ಹೋದ್ರು, 30 ಜನ ಇಲ್ಲೋದ್ರು, ಇವೆಲ್ಲಾ ಏನು ಆಗಲ್ಲ‌.  ಯಾರೇ ಈತರ ಕನಸು ಕಂಡರೆ ಅದು ಕನಸಾಗಿಯೇ ಉಳಿಯುತ್ತೆ ಎಂದು ತಿಳಿಸಿದರು.

ಹೊಸ ಸೈಬರ್ ನೀತಿ ತರ್ತಿದ್ದೇವೆ

ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗ್ತಿರುವ ವಿಚಾರವಾಗಿ ಮಾತನಾಡಿ, ನಮ್ಮ ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸ್ತಿದ್ದೇವೆ. ಹೋಂ ಡಿಪಾರ್ಟ್ಮೆಂಟ್ ಹಾಗೂ ಐಟಿ ಡಿಪಾರ್ಟ್ಮೆಂಟ್ ಒಂದು ಸಮಿತಿಯನ್ನ ಮಾಡಿದ್ದಾರೆ. ಆ್ಯಂಟಿ ಸೈಬರ್ ಕಾನೂನನ್ನ ತರಲು ಒಂದು ಅಜೆಂಡಾ ರೂಪಿಸಲು ಜವಾಬ್ದಾರಿ ಕೊಟ್ಟಿದ್ದಾರೆ.  ನಾವು ಸದ್ಯದಲ್ಲೇ ಅದನ್ನ ಪ್ರಕಟಣೆ ಮಾಡ್ತಿವಿ. ಸೈಬರ್ ಪ್ರಕರಣಗಳನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗ್ತಿವೆ. ಇನ್ಮೇಲೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಚ್ಚು ಸೈಬರ್ ಪ್ರಕರಣಗಳೇ ಆಗ್ತಾವೆ.  ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನ ನಿಯಂತ್ರಣ ಮಾಡಲು ಕಾನೂನುಗಳು ಅಷ್ಟೊಂದು ಬಲಿಷ್ಠವಾಗಿಲ್ಲ. ಅದಕ್ಕಾಗಿ ನಾವೊಂದು ಹೊಸ ಸೈಬರ್ ನೀತಿಯನ್ನ ತರ್ತಿದ್ದೇವೆ ಎಂದು ತಿಳಿಸಿದರು.