ಮನೆ ಸ್ಥಳೀಯ ವೃತ್ತಿಪರ ಮಹಿಳೆಯರಿಗೆ ನೆಟ್‌ವರ್ಕಿಂಗ್‌ ಬಹಳ ಮುಖ್ಯ: ಸಂಜೀವ್‌ ಗುಪ್ತಾ

ವೃತ್ತಿಪರ ಮಹಿಳೆಯರಿಗೆ ನೆಟ್‌ವರ್ಕಿಂಗ್‌ ಬಹಳ ಮುಖ್ಯ: ಸಂಜೀವ್‌ ಗುಪ್ತಾ

0

ಮೈಸೂರು: ಮಹಿಳಾ ಉದ್ಯೋಗಿಗಳ ವೃತ್ತಿ ಬೆಳವಣಿಗೆಗೆ  ‘ನೆಟ್‌ವರ್ಕಿಂಗ್’ ಬಹಳ ಮುಖ್ಯ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಸಿಇಓ ಸಂಜೀವ್‌ ಗುಪ್ತಾ ಹೇಳಿದ್ದಾರೆ.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (ಕೆಎಸ್‌ಡಿಸಿ) ಸಹಯೋಗದೊಂದಿಗೆ ಇಲ್ಲಿನ ಇನ್ಫೋಸಿಸ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ವಾವ್‌’- ವುಮೆನ್‌ ಅಟ್‌ ವರ್ಕ್‌ ಸಮಾವೇಶದಲ್ಲಿ ಮಾತನಾಡಿದ ಗುಪ್ತಾ, ‘ದೇಶದ ಆರ್ಥಿಕತೆಗೆ ಮಹಿಳೆಯರ ಕೊಡುಗೆ ಬಹಳ ಮುಖ್ಯ’ ಎಂದರು. 

“ವೃತ್ತಿಪರ ಮಹಿಳೆಯರಿಗೆ ‘ನೆಟ್‌ವರ್ಕಿಂಗ್’  ಅಂದರೆ ಉದ್ಯಮ ವಲಯದಲ್ಲಿ ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸುವುದು ಬಹಳ ಮುಖ್ಯ. ವೃತ್ತಿಪರ ಬೆಳವಣಿಗೆಗಷ್ಟೇ ಅಲ್ಲದೇ, ಹೊಸ ಕ್ಷೇತ್ರಕ್ಕೆ ಕಾಲಿಡಲು ಸಹ ಸಂಪರ್ಕ ಜಾಲ ಬಹಳ ಮುಖ್ಯವಾಗುತ್ತದೆ. ಸಿದ್ಧ ಮಾದರಿಯ ಉದ್ಯೋಗಗಳಷ್ಟೇ ಅಲ್ಲದೇ, ಉತ್ಪಾದನೆ ವಲಯ ಹಾಗೂ ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲೂ ಮಹಿಳೆಯರಿಗೆ ವಿಫುಲ ಅವಕಾಶ ಇದೆ,”ಎಂದು ಅವರು ಹೇಳಿದರು. 

ಕಲಾಂ ಕಿವಿಮಾತು

ನೆಟ್‌ವರ್ಕಿಂಗ್‌ ಬಗ್ಗೆ  ಎಪಿಜೆ ಅಬ್ದುಲ್‌ ಕಲಾಂ ಹೇಳಿದ ಕಿವಿ ಮಾತನ್ನು ಹಂಚಿಕೊಂಡ ಗುಪ್ತಾ,” ಕೆಲಸದ ನಿಮಿತ್ತ ಒಮ್ಮೆ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಜತೆಯಲ್ಲಿ ಚಹಾ ಕುಡಿಯೋಣ ಎಂದು ಕಲಾಂ ಅವರು ಹೇಳಿದಾಗ, ಸಂಕೋಚದಿಂದ ಬೇಡ ಎಂದಿದ್ದೆ. ಆಗ ಅವರೊಂದು ಕಿವಿ ಮಾತು ಹೇಳಿದ್ದರು. ಹೊರಗೆ ಜನರನ್ನು ಭೇಟಿಯಾದಾಗ ಅವರೊಂದಿಗೆ ಸಮಯ ಕಳೆಯಲು ದೊರೆಯುವ ಅವಕಾಶವನ್ನು ಕಳೆದುಕೊಳ್ಳಬಾರದು, ಇಂಥ ಮಾತುಕತೆಯ ಮೂಲಕ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು ಎಂದಿದ್ದರು. ಅಂದಿನಿಂದ ನೆಟ್‌ವರ್ಕಿಂಗ್‌ ಶುರು ಮಾಡಿದ್ದೇನೆ. ನೀವು ಈ ಅಭ್ಯಾಸ ರೂಢಿಸಿಕೊಳ್ಳಿ,” ಎಂದರು.

ಹೆರಿಗೆ ರಜೆ ನಂತರ ಕೆಲಸಕ್ಕೆ ವಾಪಸಾಗಲು ವಿಫುಲ ಅವಕಾಶ

ವೃತ್ತಿಪರ ಮಹಿಳೆಯರ ಕುರಿತು ಸಮಾವೇಶದಲ್ಲಿ ಉದ್ಯೋಗಕ್ಕೆ ಅಗತ್ಯ ಕೌಶಲ, ಪೂರಕ ತರಬೇತಿ ಮತ್ತು ಉದ್ಯೋಗಾವಕಾಶಗಳು ಹಾಗೂ ನೆಟ್‌ವರ್ಕಿಂಗ್‌ನ ಮಹತ್ವದ ಬಗ್ಗೆ ವಿಷಯ ತಜ್ಞರು ಬೆಳಕು ಚೆಲ್ಲಿದರು.

ನಮ್ಮ ದೇಶದಲ್ಲಿ ಶೇ.30ರಷ್ಟು ಮಹಿಳೆಯರು ಹೆರಿಗೆ ರಜೆ ನಂತರ ಕೆಲಸಕ್ಕೆ ವಾಪಸ್ ಬರುವುದಿಲ್ಲ. ಆದರೆ, ರಜೆ ನಂತರ ಕೆಲಸಕ್ಕೆ ಮರಳಲು ವಿಫುಲ ಅವಕಾಶವಿದೆ. ಸಬೂಬು ಹೇಳದೆ ಮಹಿಳೆಯರು ಕೆಲಸಕ್ಕೆ ಬರಲು ಮನಸ್ಸು ಮಾಡಬೇಕು. ಇಂಥ ಮಹಿಳೆಯರಿಗೆ ತರಬೇತಿ, ಮತ್ತೆ ಅವಕಾಶ ನೀಡಲು ಐಬಿಎಂ ಮುಂತಾದ ಹಲವು ಕಂಪನಿಗಳು ಸಿದ್ಧ.

ಕಚೇರಿಯಲ್ಲಿ ಸಿಗಬೇಕಾದ ಬಡ್ತಿ, ವೇತನ ಹೆಚ್ಚಳ, ಉನ್ನತ ಸ್ಥಾನಮಾನವನ್ನು ಮಹಿಳೆಯರು ಕೇಳಿ ಪಡೆಯಬೇಕು. ಆತ್ಮವಿಶ್ವಾಸ ಮಹಿಳೆಯರ ದಿವ್ಯ ಮಂತ್ರವಾಗಬೇಕು ಈ ಮೂಲಕ ನಾಯಕತ್ವದ ಸ್ಥಾನಕ್ಕೇರಬಹುದು. ಸ್ವಂತ ಉದ್ಯಮ ಕಟ್ಟಿ ಬೆಳಸಬಹುದು. ಎಲ್ಲದಕ್ಕೂ ನೆಟ್‌ವರ್ಕಿಂಗ್‌ ಬಹಳ ಮುಖ್ಯವಾಗುತ್ತದೆ. ಲಿಂಕ್ಡ್‌ಇನ್‌ನಂಥ ಸಾಮಾಜಿಕ ಮಾಧ್ಯಮಗಳ ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ಸಂಪರ್ಕ ಸಾಧಿಸಬಹುದು.

ಉದ್ಯೋಗ ಮಾಹಿತಿ

ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಇರುವ ಅವಕಾಶಗಳ ಬಗ್ಗೆ ಕೆಎಸ್‌ಡಿಸಿ ಪ್ರತಿನಿಧಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಎಂವೇರ್‌ನ ನಿರ್ದೇಶಕರು ಸೌಮ್ಯ ವಿ.ಕುಮಾರನ್‌,  ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ಕರ್ನಾಟಕದ ಅಧ್ಯಕ್ಷರಾದ ಚಂದ್ರಕಾಂತ್ ಬಿ.ಎನ್., ಡಿಆರ್‌.ಐಎಂ ಏಷ್ಯಾ ಮುಖ್ಯಸ್ಥರಾದ ಯೂಲಿಯಾ ಅಸ್ಲಾಮೋವಾ, ಐಬಿಎಂನ ಗ್ಲೋಬಲ್ ಗವರ್ನಮೆಂಟ್ ಎಕ್ಸಿಕ್ಯೂಟಿವ್ ಲಾವಣ್ಯ ರಘುರಾಮನ್, ಅಕ್ನಾ ಮೆಡಿಕಲ್ ಪ್ರೈವೇಟ್ ಲಿಮಿಟೆಡ್, ಉಪಾಧ್ಯಕ್ಷರಾದ ಅಪರ್ಣಾ ಸಿ, ಜಿನೋಟೈಪಿಕ್ ಟೆಕ್ನಾಲಜಿ ಪ್ರೈವೇಟ್‌ನಲ್ಲಿ ಸಹ-ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಸುಧಾ ರಾವ್, ವಿಪ್ರಜೆನ್ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಚೈತ್ರಾ ಹರ್ಷ, ಜುಮುಟರ್ ಬಯೋಲಾಜಿಕ್ಸ್‌ನಲ್ಲಿ ಪ್ರಧಾನ ವಿಜ್ಞಾನಿ ಸಂಘಮಿತ್ರ ಭಟ್ಟಾಚಾರ್ಯ,ಕೆಐಟಿಎಸ್‌ನ

ಪರ್ಣಿಕಾ ಪವನರಾಮ್, ಸಿಐಟಿಐನ ನಿರ್ದೇಶಕರಾದ ಸರಸ್ವತಿ ರಾಮಚಂದ್ರ ಸಂವಾದದಲ್ಲಿ ಪಾಲ್ಗೊಂಡರು.

‘ಮೈಸೂರು ಬ್ಲೂ’

ಎಸ್‌ ಜೆಸಿಇ ಸ್ಟೆಪ್‌ ನಲ್ಲಿ ಗುರುವಾರ ಆಯೋಜಿಸಿದ್ದ ಬಿಯಾಂಡ್ ಬೆಂಗಳೂರು ಉಪಕ್ರಮ ‘ಮೈಸೂರು ಬ್ಲೂ 2’ – ‘ಇನ್ನೋವೇಶನ್ ಮೀಟ್ಸ್ ಇನ್ವೆಸ್ಟ್‌ ಮೆಂಟ್’ ಕಾರ್ಯಕ್ರಮದಲ್ಲಿ 15  ಸ್ಥಳೀಯ ಸ್ಟಾರ್ಟ್‌ ಅಪ್‌ ಗಳು ಹಾಗೂ ವಿದ್ಯಾರ್ಥಿಗಳ 3 ತಂಡಗಳು ಪಾಲ್ಗೊಂಡವು. ತಮ್ಮ ವಿನೂತನ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಬಂಡವಾಳವನ್ನು ಹೂಡುವಂತೆ ಹೂಡಿಕೆದಾರರ ಬಳಿ ಮನವಿ ಮಾಡಿದರು. ಶುಕ್ರವಾರ ನಡೆಯುವ ಸಮಾರಂಭದಲ್ಲಿ ಟಾಪ್‌ 3 ‘ಫಂಡಬಲ್ ಸ್ಟಾರ್ಟ್‌ ಅಪ್‌’ಗಳನ್ನು ಘೋಷಿಸಲಾಗುವುದು.