ಮನೆ ದೇವಸ್ಥಾನ ಮೈಲಾರಲಿಂಗ

ಮೈಲಾರಲಿಂಗ

0

ಮೈಲಾರ ಲಿಂಗ ಹಿಂದೂ ದೇವತೆ ಶಿವನ ಸ್ವರೂಪ. ಶಿವನು ಮಲ್ಲಾಸುರನನ್ನು ಸ೦ಹರಿಸಲು ಮೈಲಾರ ಲಿಂಗನಾಗಿ ಹುಟ್ಟಿದನೆಂದು ಪ್ರತೀತಿಯಿದೆ. ಉತ್ತರ ಕರ್ನಾಟಕದಲ್ಲಿ ಬಹಳ ಜನರ ಮನೆ ದೇವರು. ಹಾವೇರಿಗೆ ಸಮೀಪದಲ್ಲಿ ತುಂಗಭದ್ರ ನದಿ ದಡದಲ್ಲಿ ಮೈಲಾರ ಗ್ರಾಮ ಎ೦ಬ ಪ್ರಸಿಧ್ದ ಸ್ಥಳವಿದ್ದು, ಅಲ್ಲೊ೦ದು ಮೈಲಾರಲಿ೦ಗ ದೇವರ ಪ್ರಸಿದ್ಧ ದೇವಸ್ಥಾನವಿದೆ.

ಪುಣ್ಯಕ್ಷೇತ್ರವಾಗಿ ಮೈಲಾರಲಿಂಗ

ಮೈಲಾರಲಿಂಗ ಪುಣ್ಯಕ್ಷೇತ್ರ. ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಬಳಿಯಿರುವ ದೇವರಗುಡ್ಡದ ಮೇಲೆ ಮೈಲಾರಲಿಂಗ ದೇವಸ್ಥಾನವಿದೆ. ಪ್ರತಿವರ್ಷವೂ ಇಲ್ಲಿ ನಡೆಯುವ ಜಾತ್ರೆಗೆ ಪ್ರಾಮುಖ್ಯ ಇದೆ. ಸಾವಿರಾರು ಮಂದಿ ಭಕ್ತರು ಇಲ್ಲಿ ಕಲೆಯುತ್ತಾರೆ. ವರ್ಷದಲ್ಲಿ ಎರಡು ದಿವಸ ಜಾತ್ರೆ ವಿಶೇಷ ರೀತಿಯಿಂದ ನಡೆಯುತ್ತದೆ. ಜಾತ್ರಾ ಸಮಯದಲ್ಲಿ ಬಡಬಗ್ಗರಿಗೆ ಅನ್ನ ಸಂತರ್ಪಣೆ ಇರುತ್ತದೆ.

ಸ್ಥಳಪುರಾಣ

ಪ್ರಸ್ತುತ ಕ್ಷೇತ್ರದ ಸ್ಥಳಪುರಾಣದಂತೆ ಜನಗಳಿಗೆ ತೊಂದರೆ ಕೊಡುತ್ತಿದ್ದ ಮಣಿಮಲ್ಲಾಪುರ ಎಂಬ ರಾಕ್ಷಸನನ್ನು ಈಶ್ವರ ಗೊರವನ ವೇಷದಲ್ಲಿ ಬಂದು ಸಂಹರಿಸಿದನೆಂದು ಕಥೆ ಇದೆ. ಈ ರಾಕ್ಷಸ ಬ್ರಹ್ಮನನ್ನು ಪ್ರಾರ್ಥಿಸಿ ಯಾರಿಂದಲೂ ಸಾವು ಬಾರದೆ ಇರುವಂತೆ ವರ ಬೇಡುತ್ತಾನೆ. ಆದರೆ ಬ್ರಹ್ಮ ಇದಕ್ಕೆ ಕಿವಿಗೊಡದಿರಲು ಆತ ಪರಮೇಶ್ವರನನ್ನೇ ಕುರಿತು ಬೇಡುತ್ತಾನೆ. ಪರಮೇಶ್ವರ ಇದರಿಂದ ಕುಪಿತನಾಗಿ ತಲೆ ಕೊಡವುತ್ತಾನೆ. ಈಶ್ವರನ ತಲೆಯಿಂದ ತುಪ್ಪದ ಮಾಳಮ್ಮ ಎಂಬ ಹೆಣ್ಣು ಜನಿಸಿ ರಾಕ್ಷಸನನ್ನು ಕೊಲ್ಲಲು ಉದ್ಯುಕ್ತಳಾಗುತ್ತಾಳೆ. ಆಕೆಯಿಂದಲೂ ರಾಕ್ಷಸನನ್ನು ಕೊಲ್ಲಲು ಸಾಧ್ಯವಾಗದೆ ಹೋದಾಗ, ಪರಮೇಶ್ವರನೇ ಗೊರವರ ವೇಷದಲ್ಲಿ ಬಂದು ರಾಕ್ಷಸನನ್ನು ಕೊಂದು, ತುಪ್ಪದ ಮಾಳಮ್ಮನನ್ನು ಮದುವೆಯಾಗುತ್ತಾನೆ.

ಗೊರವರು

ಗೊರವರು ಎಂಬ ವೃತ್ತಿಗಾಯಕರು ಈ ಮೈಲಾರಲಿಂಗ ಕ್ಷೇತ್ರಕ್ಕೆ ಸಂಬಂಧಪಟ್ಟವರು. ಇವರ ವೇಷಭೂಷಣಗಳಿಂದ ಇವರನ್ನು ಸುಲಭವಾಗಿ ಗುರುತಿಸಬಹುದಾಗಿದೆ. ತಲೆಗೆ ಕರಡಿಯ ಚರ್ಮವನ್ನು ಟೋಪಿಯಾಗಿ ಧರಿಸುತ್ತಾರೆ. ಕೈಯಲ್ಲಿ ಡಮರುಗ, ಪಿಳ್ಳಂಗೋವಿ, ರುದ್ರಾಕ್ಷಿಮಣಿ ಹಾರ, ಎಲೆಯ ಸಂಚಿ, ದೋಣಿ (ಭಿಕ್ಷಾಪಾತ್ರೆ), ಹೊಕ್ಕಳಿನವರೆಗೂ ಹುಲಿಚರ್ಮ, ರಟ್ಟೆಗೆ ಬಳೆ, ಕಾಲಿಗೆ ಗೆಜ್ಜೆ, ಕೊರಳಿಗೆ ಕವಡೆ ಇವುಗಳಿಂದ ಶೃಂಗರಿಸಿಕೊಳ್ಳುತ್ತಾರೆ.

ಮೈಲಾರಲಿಂಗನ ಕೃಥಾಪರಂಪರೆಯನ್ನು ಇವರು ಉಳಿಸಿಕೊಂಡು ಬಂದಿದ್ದಾರೆ. ಕಥಾಪರಂಪರೆಗಿಂತ ರೋಮಾಂಚಕಾರಿ ಪವಾಡಗಳನ್ನು ಮಾಡುವಲ್ಲಿ ಇವರು ಹೆಸರಾದವರು. ಇವರ ನೃತ್ಯವೂ (ಗೊರವರ ಕುಣಿತ) ಬಹಳ ವೈವಿಧ್ಯಪೂರ್ಣವಾದುದೆನಿಸಿದೆ.