ಮನೆ ಅಪರಾಧ ಜಾತಿ ನಿಂದನೆ ಪ್ರಕರಣ: ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದ ಪೊಲೀಸರು

ಜಾತಿ ನಿಂದನೆ ಪ್ರಕರಣ: ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದ ಪೊಲೀಸರು

0

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಸಂಬಂಧ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ನೀಡಿರುವ ದೂರಿನನ್ವಯ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಶುಕ್ರವಾರ ಸಂಜೆ ಸಂಪಿಗೆಹಳ್ಳಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

ಹಿಂದೂಪರ ಕಾರ್ಯಕರ್ತನಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚಿಗೆ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್​ಶೀಟ್​​ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾದದ್ದನ್ನು ಭೈರಪ್ಪ ಹರೀಶ್ ಕುಮಾರ್ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು.

ಬಿಡುಗಡೆಯಾದ ಬಳಿಕ ತಮ್ಮ ವಿರುದ್ಧ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿರುವ ಪುನೀತ್ ಕೆರೆಹಳ್ಳಿ ತಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿದ್ದರು.ಅಕ್ಟೋಬರ್ 17 ಹಾಗೂ 18ರಂದು ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ವಿವಿಧ ಪೋಸ್ಟ್ ಮಾಡಿರುವ ಪುನೀತ್ ಕೆರೆಹಳ್ಳಿ ತಮ್ಮ ವಿರುದ್ಧ ಅವಾಚ್ಯವಾಗಿ ನಿಂದಿಸಿ, ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಉದ್ದೇಶಿಸಿ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗಾಡದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಗೂ ದಲಿತ ಸಮುದಾಯದವರಾದ ತಮ್ಮನ್ನು ಉದ್ದೇಶಿಸಿ ಜಾತಿನಿಂದನೆ ಮಾಡಲಾಗಿದೆ ಎಂದು ಭೈರಪ್ಪ ಹರೀಶ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಈ ದೂರಿನನ್ವಯ ಪುನೀತ್ ಕೆರೆಹಳ್ಳಿ ವಿರುದ್ಧ ಜಾತಿ ನಿಂದನೆ, ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪದಡಿ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ಆಗಸ್ಟ್ 11ರಂದು ಪೊಲೀಸರು ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಗೂಂಡಾ ಕಾಯ್ದೆಗೆ ಸಂಬಂಧಿಸಿಂತೆ ರಚಿಸಲಾಗಿದ್ದ ಸಲಹಾ ಮಂಡಳಿಯು ಕೆರೆಹಳ್ಳಿಯನ್ನು ಬಂಧನದಲ್ಲಿ‌‌ಡಲು ಸಾಕಷ್ಟು ಕಾರಣಗಳಿಲ್ಲ ಎಂದು‌ ವರದಿ ನೀಡಿತ್ತು. ಹೀಗಾಗಿ ಪುನೀತ್ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆ ರದ್ದುಪಡಿಸಿ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು.

ಪುನೀತ್​ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ, ರಾಮನಗರ ಹಾಗೂ ವಿಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿತ್ತು.