ಮನೆ ಸ್ಥಳೀಯ ದೇಶದ ಯಾವುದೇ ಸ್ಥಳ ಹಾಗೂ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು – ಕೆ.ಹೆಚ್ ಮುನಿಯಪ್ಪ

ದೇಶದ ಯಾವುದೇ ಸ್ಥಳ ಹಾಗೂ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು – ಕೆ.ಹೆಚ್ ಮುನಿಯಪ್ಪ

0

ಮೈಸೂರು :- “ಒಂದು ದೇಶ ಒಂದು ರೇಷನ್ ಕಾರ್ಡ್” ಯೋಜನೆಯಿಂದ ದೇಶದ ಯಾವುದೇ ಸ್ಥಳ ಹಾಗೂ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಎಚ್.ಕೆ ಮುನಿಯಪ್ಪರವರು ತಿಳಿಸಿದರು.

Join Our Whatsapp Group

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ವತಿಯಿಂದ “ಒಂದು ರಾಷ್ಟ ಒಂದು ಪಡಿತರ ಚೀಟಿ” ಯೋಜನೆಯ ಫಲಾನುಭವಿಗಳಗೆ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಲಸೆ ಹೋಗುವ ಜನರಿಗೆ ಈ ಯೋಜನೆಯು ಬಹಳ ಉಪಯುಕ್ತವಾಗಿದ್ದು, ಪ್ರತಿಯೊಬ್ಬ ಫಲಾನುಭವಿಯೂ ತಾವು ಇರುವ ಕಡೆಗಳಲ್ಲಿನ ನ್ಯಾಯಬೆಲೆ ಅಂಗಡಿಗಳಿಂದ ಪಡಿತರವನ್ನು ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ದೇಶದಲ್ಲಿ ಮೊಟ್ಟ ಮೊದಲಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಸಿದ್ಧರಾಮಯ್ಯನವರ ನೇತೃತ್ವದ ನಮ್ಮ ಕರ್ನಾಟಕ ಸರ್ಕಾರ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ಲಭ್ಯವಾಗಬೇಕು, ಯಾರೂ ಹಸಿದು ಮಲಗಬಾರದೆಂಬು ಈ ಯೋಜನೆಯ ಉದ್ದೇಶವಾಗಿತ್ತು. 10 ಕೆಜಿ ಅಕ್ಕಿ ಕೊಡುವ ಬದಲಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿದ್ದೇವೆ. ಉಳಿದ 5 ಕೆಜಿ ಅಕ್ಕಿ ಬದಲಾಗಿ ಖಾತೆಗೆ ಹಣ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ 10 ಕೆಜಿ ಅಕ್ಕಿಯನ್ನು ನೀಡುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ 6 ರಿಂದ 7 ಕೋಟಿ ಜನಸಂಖ್ಯೆಯಿದೆ. ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ನ ಅಡಿ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಪೂರೈಕೆ ಮಾಡುತ್ತಿದ್ದು, ರಾಜ್ಯದ 40 ಲಕ್ಷ ಜನರು ಇದರಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಇದನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ

ಕೇಂದ್ರವು ಈ 40 ಲಕ್ಷ ಜನರನ್ನು ಒಳಗೊಂಡಂತೆ ಆಹಾರ ಪೂರೈಕೆ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗುತ್ತಿದೆ ಎಂದರು.

ರಾಜ್ಯದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಒಂದು ವಿಸ್ತೃತ ಸಭೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ 20 ಸಾವಿರ ನ್ಯಾಯಬೆಲೆ ಅಂಗಡಿ ಮಾಲೀಕರಿದ್ದು, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ಬಿಪಿಎಲ್ ಕಾರ್ಡುದಾರವನ್ನು ಹೊರತುಪಡಿಸಿ ಎಪಿಎಲ್ ಕಾರ್ಡ್ ಪಡೆಯಲು ಇಚ್ಚಿಸುವವರಿಗೆ ಯಾವುದೇ ನಿಬಂಧನೆಗಳಿಲ್ಲದೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಬಹುದು. ತಲಾ ಒಂದು ಕೆಜಿಗೆ 15 ರೂ. ರಂತೆ ಎಪಿಎಲ್ ಕಾರ್ಡುದಾರಿಗೂ ಕೂಡ ಅಕ್ಕಿಯನ್ನು ವಿತರಿಸಲಾಗುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸಿರುವ ಬಿಪಿಎಲ್ ಕಾರ್ಡ್ದಾರರಿಗೆ ಶೀಘ್ರದಲ್ಲೇ ಕಾರ್ಡನ್ನು ನೀಡಲಾಗುತ್ತದೆ. 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ‘ಅನ್ನ ಸುವಿಧ’ ಶೀರ್ಷಿಕೆಯಡಿ ಮನೆ ಬಾಗಿಲಿಗೆ ಪಡಿತರವನ್ನು ತಲುಪಿಸುವಂತಹ ಕೆಲಸವನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಒಂದು ರಾಷ್ಟ್ರ ಒಂದು ಪಡಿತರ ಚೀಟಿಯು ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು, ಇದರ ಸದುಪಯೋಗನ್ನು ಪಡೆದುಕೊಳ್ಳಿ ಎಂದರು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪನವರು ಮಾತನಾಡಿ, ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವಂತೆ ಭಾರತೀಯರಾದ ನಾವೆಲ್ಲರೂ ಒಂದೇ. ಭಾರತದಲ್ಲಿ ಸುಮಾರು 10 ರಿಂದ 12 ಕೋಟಿ ಜನರು ಉದ್ಯೋಗ ಹಾಗೂ ಇತರ ಕಾರಣಗಳಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವವರಿದ್ದಾರೆ. ರಾಜ್ಯದಲ್ಲಿ 80 ಲಕ್ಷದಿಂದ 1 ಕೋಟಿ ಜನರು ವಲಸೆ ಹೋಗುತ್ತಾರೆ. ಅವರಿಗೆ ಸರ್ಕಾರಗಳು ನೀಡುವ ಪಡಿತರ ಆಹಾರವನ್ನು ಪಡೆದುಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಈ ಯೋಜನೆಯಿಂದ ಬಿಪಿಎಲ್ ಕಾರ್ಡ್ ಹೊಂದಿರುವವರು ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಪಡೆದುಕೊಳ್ಳಬಹುದು. ಇದು ದೇಶದ ಪ್ರತಿಯೊಬ್ಬ ಬಿಪಿಎಲ್ ಕಾರ್ಡುದಾರರಿಗೂ ಅತ್ಯಂತ ಸಹಾಯಕವಾಗುವ ಯೋಜನೆಯಾಗಿದೆ.

ಆಹಾರ ಪ್ರತಿ ಒಬ್ಬ ಮನುಷ್ಯನ ಹಕ್ಕು. ಅದೇ ರೀತಿಯಾಗಿ ದೇಶದ ನಾಗರಿಕರಿಗೆ ಆಹಾರ ಮತ್ತು ಅಗತ್ಯ ಧಾನ್ಯಗಳ ಸರಬರಾಜು ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಭಾರತೀಯ ಆಹಾರ ಭದ್ರತೆ ಕಾಯ್ದೆಯು ಭಾರತದ ಸಂವಿಧಾನದ ಅಶಯದಲ್ಲಿ ರೂಪಿತವಾಗಿದೆ. ಇದು ಪ್ರತಿಯೊಬ್ಬ ಭಾರತೀಯ ನಾಗರಿಕನ ಬದುಕುವ ಆಹಾರದ ಹಕ್ಕುಗಳನ್ನು ರಕ್ಷಿಸುತ್ತದೆ. ಯುಪಿಎ ಸರ್ಕಾರವು ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಂತೆ ಮುಂದಿನ ಭಾಗವಾಗಿ ಎನ್‌ಡಿಎ ಸರ್ಕಾರವು ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಜಾರಿಗೆ ತಂದಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕವಾಗಿ ಗಣತಂತ್ರ ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ದೇಶದ ನಾಗರಿಕರನ್ನು ರಕ್ಷಿಸುವಂತ ಕೆಲಸ ಮಾಡಬೇಕು. ಹೀಗೆ ಮಾಡಿದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮೃದ್ಧ ಭಾರತ ಹಾಗೂ ಗಾಂಧೀಜಿಯ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಹಿರಿಯ ಆರ್ಥಿಕ ಸಲಹೆಗಾರರಾದ ನಂದಿತಾ ಮಿಶ್ರಾ ಅವರು, ಇಡೀ ದೇಶದಲ್ಲಿಯೇ ಮೊದಲಿಗೆ ಕರ್ನಾಟಕ ರಾಜ್ಯದಲ್ಲಿ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ತಮ್ಮ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರದ ಮಹತ್ವ ನಿಲುವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಆಹಾರದ ಮೇಲೆ ಹಕ್ಕಿದೆ. ಯಾರ ಆಹಾರದ ಹಕ್ಕನ್ನು ಕಸಿದುಕೊಳ್ಳಬಾರದೆಂಬ ನಿಟ್ಟಿನಲ್ಲಿ ಈ ಯೋಜನೆಯು ಬಹಳ ಜನರಿಗೆ ಉಪಯೋಗಕಾರಿಯಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಉದ್ಯೋಗವನ್ನು/ ಕೆಲಸವನ್ನು ಅರಸಿ ಪ್ರಯಾಣಿಸುವ ಅಥವಾ ವಲಸೆ ಹೋಗುವ ಜನರಿಗೆ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸುವ ಮುಖ್ಯ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು.

ದೇಶದಲ್ಲಿ 80 ಕೋಟಿಗೂ ಅಧಿಕ ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಅಂತರಾಷ್ಟ್ರೀಯ ಸಿರಿಧಾನ್ಯಗಳ ಈ ವರ್ಷದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಈ ಯೋಜನೆ ಬಹಳ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಕೊಡಗು ಸಂಸದರಾದ ಪ್ರತಾಪ್ ಸಿಂಹ, ಚಾಮರಾಜ ವಿಧಾನಸಭಾ ಶಾಸಕರಾದ ಕೆ. ಹರೀಶ್ ಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳಾದ ಪ್ರಕಾಶ್, ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು, ಉಪ-ಆಯುಕ್ತರು ಹಾಗೂ ಜಂಟಿ ನಿರ್ದೇಶಕರು ಸೇರಿದಂತೆ ಇತರರು ಭಾಗವಹಿಸಿದ್ದರು.