ಮನೆ ದೇವಸ್ಥಾನ ದಾರುಕ ವಧೆ

ದಾರುಕ ವಧೆ

0

ಕ್ಷಣಮಾತ್ರದಲ್ಲಿ ಕ್ಷಣಮಾತ್ರದಲ್ಲಿ ಭದ್ರಕಾಳಿಯು ಕೋಪವಿಷ್ಟಳಾಗಿ ಭೀಕರಾವತಾರವನ್ನ ತಾಳಿ ಕಂಠಕಾಳಿಯಾದಳು. ಬೇತಾಳನ ಹೆಗಲನ್ನೇರಿದ ಆಕೆಯು ರಣಚಂಡಿಯಾಗಿ ಹೋರಾಡಿದಳು. ವಿವಿಧಾಸ್ತ್ರಧಾರಿಗಳಾಗಿ ಕೋಟಿ ದಾರುಕಾಸುರನನ್ನ ಸಮ್ಮರಿಸ ತೊಡಗಿದಳು. ತನ್ನ ಕೋಪಾಗ್ನಿಂದ ಬ್ರಹ್ಮಾಂಡವನ್ನೇ ನಾಶಪಡಿಸುವ ಇಚ್ಛೆತಾಳಿದ ಕಂಠಕಾಳಿಯು ಮೂಲದಾರುಕನನ್ನು ಪತ್ತೆ ಹಚ್ಚಿ ಹಿಡಿದಳದಳು. ಆ ಸಮಯವು ಮುಸ್ಸಂಜೆಯಾಗಿತ್ತು. ರಕ್ಕಸನನ್ನು ಬೇತಾಳದ ನಾಲಿಗೆಯಲ್ಲಿ ಮಲಗಿಸಿದಳು. ತನ್ನ ಕರಗಳಿಂದ ಆತನ ತಲೆ ಒಡೆದು, ಕಪಾಲ ಪಾತ್ರೆನ್ನಾಗಿಸಿ ಅದರಲ್ಲಿ ರಕ್ತವನ್ನು ಶೇಖರಿಸಿ ಪಾನ ಮಾಡಿದಳು. ರಕ್ಕಸರ ರುಂಡಗಳನ್ನ ಪೋಣಿಸಿ ಮಾಲೆಯಾಗಿ ಧರಿಸಿದಳು. ಎಲ್ಲಾ ಆಯುಧಗಳಿಗೂ ರಕ್ತತರ್ಪಣ ನೀಡಿದಳು. ಮೂಲದಾರುಕಾಸುರನ ಅಂತ್ಯದಿಂದ ದಾರುಕಾಸುರರೆಲ್ಲ ನಿರ್ನಾಮವಾದರು. ಕಂಠಕಾಳಿಯ ಇದೇ ಭಾವಾವೇಶದಲ್ಲಿ ಬೇತಾಳನ ಹೆಗಲನ್ನೇರಿಗೆ ಶಿವ ಪಾರ್ವತಿಯರಲ್ಲಿ ತೆರಳಿದಳು.

Join Our Whatsapp Group

ಮಹಾಕಾಳಿಯ ಭೀಬತ್ಸರೂಪವನ್ನು ಕಂಡಂತಹ ದೇವತೆಗಳೆಲ್ಲರೂ ಭಯವಿಹ್ವಲರಾಗಿ ಶಾಂತಳಾಗುವಂತೆ ಆಕೆಯನ್ನು ಸುತ್ತಿಸಿದರು. ತ್ರಿಮೂರ್ತಿಗಳು ಹಾಡಿ ಹೊಗಳಿದರು. ಆದರೂ ಚಂಡಿಯು ಶಾಂತ ಸ್ವರೂಪಿಯಾಗಲಿಲ್ಲ. ಅಟ್ಟಹಾಸ ಮಾಡುತ್ತಾ, ರುದ್ರನರ್ತನಕ್ಕೆ ತೊಡಗಿದಳು. ಆಕೆಯ ನೆತ್ತಿಯಿಂದ ಹೊರ ಸೂಸುವ ನೇತ್ರಾಗಿಯೂ ಬ್ರಹ್ಮಾಂಡವನ್ನೇ ಭಸ್ಮಮಾಡುವ ಸನ್ನಿವೇಶವನ್ನು ಗ್ರಹಿಸಿದ ಪರಮಶಿವನು ಅಗ್ನಿಯನ್ನು ತಣಿಸಲು ತನ್ನದೇ ಅಂಶವಾಗಿ, ತನ್ನದೇ ಆದ ರೂಪದಲ್ಲಿ ಆ ಭೀಕರ ರೂಪಿನ ಪಾದದಡಿಯಲ್ಲಿ ದೇಹ ಚಾಚಿ ಪವಡಿಸಿದನು. ರೌದ್ರಕಾಳಿಯೂ ಆ ಶರೀರದ ಮೇಲೆ ಅಹೋರಾತ್ರಿ ನರ್ತನಗೈದಳು. ಶಿವಕಾಯದ ತಂಪಿನಿಂದಾಗಿ ಮಹಾಕಾಳಿಯ ರೌದ್ರಾವೇಶವು ಇಳಿಯತೊಡಗಿ ಶಾಂತಳಾದಳು. ದೇವತೆಗಳೆಲ್ಲರೂ ಹರ್ಷ ತಳೆದು ದೇವಿಯನ್ನು ಸುತ್ತಿಸಿದರು.

ಶಿವ ಪಾರ್ವತಿಯರ ಅಭಯ :

ಭಯಂಕರಿಯಾಗಿದ್ದ ಕಾಳಿಯು ಕಾರುಣ್ಯಮೂರ್ತಿಯಾಗಿ ಪಾರ್ವತಿ- ಪರಮೇಶ್ವರರ ಪಾದಕ್ಕೆರಗಿದಳು. ಅವರು ಷಟ್ಕನ್ನಿಕೆಯರನ್ನೆಲ್ಲ ಕರೆದು ಮುಂದಿರಿಸಿ “ಮಕ್ಕಳೇ, ನೀವೆಲ್ಲರೂ ನಿಮ್ಮ ನಿಮ್ಮ ಅವತಾರ ಉದ್ದೇಶಗಳನ್ನ ಪೂರೈಸಿರುತ್ತೀರಿ. ಮುಂದೆ ನೀವೆಲ್ಲರೂ ಭದ್ರಕಾಳಿಯನ್ನು ಹಿಂಬಾಲಿಸಿ, ಭೂಲೋಕಕ್ಕೆ ತೆರಳಬೇಕು. ಅಲ್ಲಿ ನೀವು ದುಷ್ಟರನ್ನ ನಿಗ್ರಹಿಸಿ, ಶಿಷ್ಟಪರಿಪಾಲನೆ ಮಾಡಬೇಕು. ಸಪ್ತಮಾತೃಕೆಯರೆಂದು ಕರೆಸಲ್ಪಡುವ ನೀವೆಲ್ಲರೂ ಸಾಮಾನ್ಯ ದೇವಿಯವರಲ್ಲ. ನಿಮಗೆಲ್ಲರಿಗೂ ಜನ್ಮ ನೀಡಿ ಪರಿಪಾಲಿಸುತ್ತಿರುವ ತ್ರಿಲೋಕ ಜನನಿಯ ಅಂಶವತಾರಗಳೆಲ್ಲವೂ ನಿಮ್ಮಲ್ಲಿವೆ.       ಭೂಮಂಡಲದಲ್ಲಿ ನೀವೆಲ್ಲರೂ ಶಂಕರಿ, ಭವಾನಿ, ಕಾತ್ಯಾಯಿನಿ, ನಾರಾಯಣಿ, ಪಾರ್ವತಿ, ಪರಮೇಶ್ವರಿ, ದುರ್ಗಾದೇವಿ, ಶಿವಾಣಿ, ಶಾರದೆ, ಅನ್ನಪೂರ್ಣ, ಮೀನಾಕ್ಷಿ, ಸರಸ್ವತಿ, ತ್ರಿಪುರ ಸುಂದರಿ, ಭೈರವಿ, ಲಲಿತ ಮೊದಲಾದ ಸಹಸ್ರನಾಮಗಳಿಂದ ಆರಾಧಿಸಲ್ಪಡುವಂತರಾಗಿ. ಭಕ್ತ ಕೋಟಿಗಳು ನಿಮಗಲ್ಲಿ ದೇಗುಲಗಳನ್ನೂ, ಸ್ಥಾನಗಳನ್ನೂ, ಆಲಯಗಳನ್ನೂ, ಗುಡಿ-ಗೋಪುರಗಳನ್ನೂ ನಿರ್ಮಿಸಲಿದ್ದಾರೆ. ಅಲ್ಲಿ ನೀವೆಲ್ಲರೂ ನಿಮಗಿಷ್ಟವಾದಲ್ಲಿ ವಿವಿಧ ನಾಮದೇಯಗಳಿಂದ ನಿಮ್ಮ ಕಾರಣೀಕ ಶಕ್ತಿಗಳನ್ನು ಪ್ರಕಟಿಸಿ, ನೆಲೆಯಾಗಿರಿ. ನಿಮ್ಮನ್ನು ಆರಾಧಿಸುವವರಿಗೆ, ಇಷ್ಟ ದೇವರಾಗಿಯೂ, ಮನೆದೇವರಾಗಿಯು, ಕುಲದೇವರಾಗಿಯು, ಅನುಗ್ರಹವನ್ನು ನೀಡಿರಿ. ಭೂಲೋಕದಲ್ಲಿ ಸುಭಿಕ್ಷೆಯುಂಟಾಗುವಂತೆ ಮಾಡಿ, ನಿಮ್ಮನ್ನ ಅವಲಂಬಿಸಿಕೊಂಡು ಬರುತ್ತಿರುವ ಭೂತ-ಗಣಗಳಿಗೆಲ್ಲ ನಿರ್ದಿಷ್ಟ ಸ್ಥಾನಗಳನ್ನು ಕಲ್ಪಿಸಿ ನೆಲೆಗೊಳ್ಳುವ ವ್ಯವಸ್ಥೆ ಮಾಡಿ. ನೀವು ನೆಲೆಯಾಗಿರುವ ಎಲ್ಲ ಜಗತ್ತಿನ ಮಾತಾಪಿತರಾದ ನಾವೂ ಅದೃಶ್ಯರಾಗಿ ನೆಲೆಯಾಗಿ ಶುಭ ಮಂಗಳವನ್ನುಂಟು ಮಾಡುತ್ತೇವೆ” ಎಂದು ಎಂದರುಹಿದರು.

ಮೇಲ್ಕಾಣಿಸಿದ ಪೌರಾಣಿಕ ಕಥೆಗೆ ಪೂರಕವಾಗಿ ತಮಿಳುನಾಡು ಮತ್ತು ಕೇರಳ ರಾಜ್ಯದ ಉದ್ದಗಲಕ್ಕೂ ಶಿವಾಲಯಗಳನ್ನೂ, ದೇವಿ ಕ್ಷೇತ್ರಗಳನ್ನೂ ಕಾಣಬಹುದು. ಭದ್ರಕಾಳಿಯು ಕೇರಳದಲ್ಲಿ ಭಗವತಿ ಎಂದು ಆರಾಧನೆಗೊಳ್ಳುತ್ತಾರೆ. ಕೇರಳಾದ ಜಾನಪದ ಕಲೆಗಳಾಗಿರುವ ತೇಯ್ಯಂ, ತಿರ, ನೃತ್ತಂ,ಕೂತ್ತ್, ತುಳ್ಳಲ್, ಕಳಿ, ಆಟ್ಟ, ಕೆಟ್ಟ್ ಮೊದಲಾದವುಗಳ ಕ್ರಮಗಳೆಲ್ಲದರಲ್ಲಿಯೂ ಭಗವತಿಯ ಆರಾಧನೆಗೆ ಪ್ರಾಧಾನ್ಯತೆಯನ್ನು ಕಲ್ಪಿಸಿರುವುದನ್ನ ಕಾಣಬಹುದು. ಭೂಮಂಡಲವನ್ನು ಪ್ರವೇಶಿಸಿದ ಭದ್ರಕಾಳಿ ಮತ್ತು ಇತರ ಮಾತೃಕೆಯರು ನಾಡಿನ ಅಲ್ಲಲ್ಲಿ ಜಗತ್ಕಲ್ಯಾಣಕಾರಿಗಳಾದರು ಎಂದು ಕೇರಳದ ಪುರಾಣೇತಿಹಾಸಗಳಿಂದ ತಿಳಿಯಬಹುದಾಗಿದೆ.