ಮನೆ ಸ್ಥಳೀಯ ಸರಗೂರು: ಹುಲಿ ದಾಳಿಗೆ ರೈತ ಬಲಿ

ಸರಗೂರು: ಹುಲಿ ದಾಳಿಗೆ ರೈತ ಬಲಿ

0

ಸರಗೂರು: ಜಮೀನಿನಲ್ಲಿ ದನ ಕಾಯುತ್ತಿದ್ದ ರೈತನ ಮೇಲೆ ಹುಲಿಯೊಂದು ದಾಳಿ ನಡೆಸಿಕೊಂದು ತಿಂದಿರುವ ಘಟನೆ ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯ ಕ್ವಾಟ್ರಸ್ ಬಳಿಯೇ ನಡೆದಿದೆ.

ತಾಲ್ಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ರೈತ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ (42) ಹುಲಿ ದಾಳಿಯಲ್ಲಿ ಮೃತಪಟ್ಟವರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಬಾಲಾಜಿ ನಾಯ್ಕ ಎಂದಿನಂತೆ ಸೋಮವಾರ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮೊಳೆಯೂರು ವಲಯದ ಅಂಚಿನಲ್ಲಿರುವ ಬಿ.ಮಟಕೆರೆ- ಹೊಸಕೋಟೆ ಮಾರ್ಗದ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯುಸುತ್ತಿದ್ದರು.

ಈ ವೇಳೆ ಆಹಾರ ಅರಸಿ ಕಾಡಿನಿಂದ ಹೊರಬಂದಿದ್ದ ಹುಲಿಯೊಂದು ದನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಗಾಬರಿಗೊಂಡ ದನಗಳು ಚದುರಿ ಹೋಗಿವೆ. ಆಗ ದನ ಕಾಯುತ್ತ ಕುಳಿತಿದ್ದ ರೈತ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿದೆ.

ಹುಲಿದಾಳಿಯಿಂದ ಬಾಲಾಜಿ ನಾಯ್ಕ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಹುಲಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಈ ದೃಶ್ಯವನ್ನು ಪಕ್ಕದ ಜಮೀನಲ್ಲಿದ್ದ ದನಗಾಹಿಯೊಬ್ಬರು ಕಂಡು ಗಾಬರಿಯಾಗಿ ಕೂಗಿಕೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಂದು ನೋಡುವಷ್ಟರಲ್ಲಿ ಹುಲಿ ಬಾಲಾಜಿ ನಾಯಕರ ಎಡ ಕಾಲು, ದೇಹದ ಕೆಲ ಭಾಗಗಳನ್ನು, ತಲೆಯ ಭಾಗವನ್ನು ತಿಂದಿತ್ತು ಎನ್ನಲಾಗಿದೆ.

ವಿಷಯ ತಿಳಿದ ಆಗಮಿಸಿದ ತಹಶೀಲ್ದಾರ ಪರಶಿವಮೂರ್ತಿ, ಪಿಎಸ್ಐ ನಂದೀಶ್ ಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು.