ಮನೆ ರಾಜಕೀಯ ‘ಆಪರೇಶನ್ ಕಮಲ’ ಮಾಡುವ ಪರಿಸ್ಥಿತಿ ಬಿಜೆಪಿಗೆ ಬರುವುದಿಲ್ಲ: ಬಿ.ವೈ. ವಿಜಯೇಂದ್ರ

‘ಆಪರೇಶನ್ ಕಮಲ’ ಮಾಡುವ ಪರಿಸ್ಥಿತಿ ಬಿಜೆಪಿಗೆ ಬರುವುದಿಲ್ಲ: ಬಿ.ವೈ. ವಿಜಯೇಂದ್ರ

0

ಬೀದರ್: ರಾಜ್ಯದಲ್ಲಿ ‘ಆಪರೇಶನ್ ಕಮಲ’ ಮಾಡುವ ಪರಿಸ್ಥಿತಿ ಬಿಜೆಪಿಯವರಿಗೆ ಬರುವುದಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಅಧಿಕಾರದ ವೈಫಲ್ಯದಿಂದ ಬೇಸತ್ತು ಆಡಳಿತಾರೂಢ ಪಕ್ಷದ ಶಾಸಕರು ಹೊರ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬುಧವಾರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ಸುದ್ದಿಗಾರರ ಜತೆ ಮಾತನಾಡಿ, ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಹೊಸ ಕಾಮಗಾರಿ, ಯೋಜನೆಗಳನ್ನು ಘೋಷಿಸಿಲ್ಲ. ಅಭಿವೃದ್ಧಿಗಾಗಿ ಬಿಡುಗಾಡು ಸಹ ಬಿಡುಗಡೆ ಮಾಡಿಲ್ಲ. ಆಡಳಿತದಲ್ಲಿರುವ ಪಕ್ಷದ ಶಾಸಕರಿಗೆ ತಲೆ ಎತ್ತಿ ಓಡಾಡದಂಥ ಪರಿಸ್ಥಿತಿ ಇದೆ. ಸರ್ಕಾರದ ದುರಾಡಳಿತದಿಂದ ಕಾಂಗ್ರೆಸ್ ಶಾಸಕರು ಹೊರ ಬಂದರೆ ಅದಕ್ಕೆ ನಾವು (ಬಿಜೆಪಿ) ಜವಾಬ್ದಾರರಲ್ಲ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು, ಜನರ ದಿಕ್ಕು ತಪ್ಪಿಸಲು ಬಿಜೆಪಿ ಆಪರೇಶನ್ ಕಮಲ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ಸಿಗರ ಆರೋಪವನ್ನು ಒಪ್ಪುವುದಿಲ್ಲ. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದ್ದು, ಎಲ್ಲೆಡೆಯಿಂದ ವರದಿ ಪಡೆದ ಮೇಲೆ ಪ್ರಧಾನಿಗಳು ಪರಿಹಾರವನ್ನು ಘೋಷಣೆ ಮಾಡಲಿದ್ದಾರೆ. ಇನ್ನೂ ರಾಜ್ಯದಲ್ಲಿ ಬರ ತಾಲೂಕುಗಳನ್ನು ಘೋಷಣೆ ಮಾಡಿದ್ದೆ ತಡವಾಗಿ. ಹೀಗಾಗಿ ಬರ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಹೊರಿಸುವ ಬದಲು ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಸಲಹೆ ನೀಡಿದರು.